ಪಿಎಸ್ಐ ನೇಮಕಾತಿ ಅಕ್ರಮ: 12 ಮಂದಿಯ ಜಾಮೀನು ಅರ್ಜಿ ವಜಾ
ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತ ರಾಗಿರುವ 12 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇಲ್ಲಿನ 3ನೇ ಜೆಎಂಎಫ್ ನ್ಯಾಯಾಲಯ ಹಾಗೂ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು ಬುಧವಾರ ತಿರಸ್ಕರಿಸಿವೆ.
ಆರೋಪಿತರಾದ ಮಹಾಂತೇಶ ಪಾಟೀಲ್, ರುದ್ರಗೌಡ ಬಲರಾಯಪ್ಪ, ಶರಣಪ್ಪ ಬೋರಗಿ, ಹಯ್ನಾಳಿ ನಿಂಗಣ್ಣ ದೇಸಾಯಿ, ವಿಶಾಲ ಬಸವರಾಜ ಶಿರೂರ, ಮಂಜುನಾಥ ಮೇಳಕುಂದಿ, ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ ಸುರೇಶ ಕಾಟೆಗಾಂವ, ಕಾಳಿದಾಸ, ದಿವ್ಯಾ ಕಾರು ಚಾಲಕ ಸದ್ದಾಂ, ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಅಭ್ಯರ್ಥಿ ಪ್ರವೀಣಕುಮಾರ್ ಹಾಗೂ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿ ಸುಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.
ಮೇಳಕುಂದಿ, ಕಾಶಿನಾಥ ನ್ಯಾಯಾಂಗ ಬಂಧನಕ್ಕೆ
ಅಕ್ರಮದ ರೂವಾರಿಗಳಾದ ಮಂಜುನಾಥ ಮೇಳಕುಂದಿ ಮತ್ತು ಜ್ಞಾನ ಜ್ಯೋತಿ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ ಅವರ ಸಿಐಡಿ ವಿಚಾರಣೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮೇ 1ರಂದು ಮೇಳಕುಂದಿ ಮತ್ತು ಕಾಶಿನಾಥ ಶರಣಾಗಿದ್ದು, 11 ದಿನಗಳಿಂದ ಸಿಐಡಿ ವಿಚಾರಣೆಯಲ್ಲಿದ್ದರು. ಕಾಶಿನಾಥನ ವಿಚಾರಣೆ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಗುರುವಾರ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.