BREAKING NEWS: JDS ಪಕ್ಷದಿಂದ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ: ಶ್ರೀಶೈಲ ನಿಂಗಪ್ಪ ಗಡದಿನ್ನಿ, ಚಂದ್ರಶೇಖರ್ ಲೋಣಿಗೆ ಟಿಕೆಟ್ ಘೋಷಣೆ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದಂತ 2 ಶಿಕ್ಷಕರ ಕ್ಷೇತ್ರಗಳಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಶ್ರೀಶೈಲ ನಿಂಗಪ್ಪ ಗಡದಿನ್ನಿ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಚಂದ್ರಶೇಖರ್ ಲೋಣಿಗೆ ಟಿಕೆಟ್ ನೀಡಲಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡಿದಂತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಎರಡ್ಮೂರು ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ. ಇಂದು ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಘೋಷಿಸುತ್ತೇವೆ. ಇಬ್ರಾಹಿಂ ಅವರೂ ಸಹ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ನಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಈ ಬಗ್ಗೆ ಇಂದು ಅವರೂ ನಮ್ಮ ಬಳಿ ಚರ್ಚಿಸಿದರು. ಅವರೂ ಕೂಡ ದೇವೇಗೌಡರ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ ಎಂದರು.
ರಾಜ್ಯಸಭೆಗೆ ಇನ್ನೂ ಐದು ದಿನ ಕಾಲಾವಕಾಶ ಇದೆ. ಎಲ್ಲಾ ನಮ್ಮ ಕುಟುಂಬ ವರ್ಗದವರೇ ಯಾರಿಗೂ ಅಸಮಾಧಾನ ಇಲ್ಲ. ಟಿ.ಎ ಶರವಣ ಹಾಗೂ ವೀರೇಂದ್ರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎಂಟತ್ತು ಮಂದಿಯ ಒತ್ತಡ ಇತ್ತು. ದಾಸರಹಳ್ಳಿಯ ಅಂದಾನಪ್ಪ, ಕೋಲಾರದ ರಾಜೇಶ್ವರಿ, ನಾರಾಯಣ ಸ್ವಾಮಿ ಒತ್ತಡವೂ ಇತ್ತು. ಅಂತಿಮವಾಗಿ ಸಂಜೆ ನಿರ್ಧಾರ ಮಾಡುತ್ತೇವೆ ಎಂದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡುತ್ತೇವೆ. ಎಲ್ಲಾ ಪಕ್ಷಗಳಲ್ಲೂ ಏರುಪೇರು ಸಹಜವಾಗಿದೆ. ಶರವಣ ಜೊತೆಯೂ ಈಗ ಚರ್ಚಿಸಿದೆ. ಅವರೂ ತುಂಬಾ ನಿರೀಕ್ಷೆ ಇಟ್ಕೊಂಡಿದ್ದಾರೆ. ನಾನು ಪಕ್ಷದ ನಿಷ್ಠಾವಂತ, ನನಗೇ ಟಿಕೆಟ್ ಕೊಡಿ ಎಂದಿದ್ದಾರೆ. ಆದರೂ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿದೆ ಎಂದರು.
ಕೊನೆಗೆ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಶ್ರೀಶೈಲ ನಿಂಗಪ್ಪ ಗಡದಿನ್ನಿ ಹೆಸರು ಘೋಷಣೆ ಮಾಡಿದರು. ಬಸವರಾಜ್ ಹೊರಟ್ಟಿ ವಿರುದ್ಧ ಅಭ್ಯರ್ಥಿಯನ್ನ ದಳಪತಿಗಳು ಕಣಕ್ಕಿಳಿಸಿದರು. ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಚಂದ್ರಶೇಖರ್ ಲೋಣಿಗೆ ಟಿಕೆಟ್ ನೀಡಲಾಗಿದೆ. ಮೇ.26ರಂದು ಪರಿಷತ್ ಚುನಾವಣೆ ನಡೆಯಲಿದೆ.