ಮೇ 25ರಂದು ಭಾರತ್ ಬಂದ್ ಯಾಕೆ? ಏನಿರುತ್ತೆ, ಏನಿರಲ್ಲ?- ಡೀಟೇಲ್ಸ್

ಬೆಂಗಳೂರು, ಮೇ 24: ಜಾತಿ ಆಧಾರಿತ ಜನಗಣತಿ ನಡೆಸಬೇಕು, ಸಿಎಎ ಎನ್ಆರ್ಸಿ ಅನುಷ್ಠಾನ ಮಾಡಬಾರದು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘಟನೆಯೊಂದು ಮೇ 25, ಬುಧವಾರದಂದು ಭಾರತ್ ಬಂದ್ಗೆ ಕರೆ ಕೊಟ್ಟಿದೆ.
ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಉದ್ಯೋಗಿಗಳ ಒಕ್ಕೂಟ (BAMCEF) ಕರೆಕೊಟ್ಟಿರುವ ಭಾರತ್ ಬಂದ್ ಅನ್ನು ಪ್ರಮುಖ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಬಹುಜನ್ ಮುಕ್ತಿ ಪಾರ್ಟಿ, ಬಹುಜನ್ ಕ್ರಾಂತಿ ಮೋರ್ಚಾದಂಥ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ. ದೇಶಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ಗೆ ಬೆಂಬಲ ನೀಡುವಂತೆ ಬಹುಜನ್ ಮುಕ್ತಿ ಪಾರ್ಟಿ ಮನವಿ ಮಾಡಿದೆ. ಆದಾಗ್ಯೂ ಭಾರತ್ ಬಂದ್ ಯಶಸ್ವಿಯಾಗುವ ಸಾಧ್ಯತೆ ಬಹುತೇಕ ಇಲ್ಲ.
ಬಂದ್ ದಿನ ಏನಿರುತ್ತೆ, ಏನಿರಲ್ಲ:
ಸಾರಿಗೆ ಸಂಸ್ಥೆಗಳ ನೌಕರರಾಗಲೀ, ಬೇರೆ ಸರಕಾರಿ ನೌಕರರಾಗಲೀ, ಚಾಲಕರ ಸಂಘಟನೆಗಳಾಗಲೀ ಯಾರೂ ಕೂಡ ಭಾರತ್ ಬಂದ್ಗೆ ಬೆಂಬಲ ಘೋಷಿಸಿಲ್ಲ. ಹೀಗಾಗಿ, ಸರಕಾರಿ ಮತ್ತು ಖಾಸಗಿ ಕಚೇರಿಗಳು ಬಾಗಿಲು ಮುಚ್ಚುವ ಸಾಧ್ಯತೆ ಇಲ್ಲ. ಶಾಲಾ ಕಾಲೇಜುಗಳು ಮಾಮೂಲಿಯಂತೆ ಕಾರ್ಯನಿರ್ವಹಿಸಲಿವೆ. ಬಸ್ಸು, ರೈಲು, ಕ್ಯಾಬ್ ಇತ್ಯಾದಿ ಸಾರಿಗೆ ಸೇವೆಗಳು ಯಥಾಪ್ರಕಾರ ಇರಲಿವೆ.
ಅಲ್ಲಲ್ಲಿ ಬೆರಳೆಣಿಕೆ ಜಾಗದಲ್ಲಿ ಸಣ್ಣಪುಟ್ಟ ಗುಂಪುಗಳಿಂದ ಪ್ರತಿಭಟನೆ ನಡೆಯಬಹುದು ಬಿಟ್ಟರೆ ಉಳಿದಂತೆ ಭಾರತ್ ಬಂದ್ನಿಂದ ಜನಜೀವನಕ್ಕೆ ತೊಂದರೆಯಾಗುವ ಸಂಭವ ಇಲ್ಲ.
ಭಾರತ್ ಬಂದ್: ಬೇಡಿಕೆಗಳಿವು:
* ಜಾತಿ ಆಧಾರಿತ ಜನಗಣತಿ ಆಗಬೇಕು
* ಮತದಾನಕ್ಕೆ ಇವಿಎಂ ಯಂತ್ರಗಳ ಬಳಕೆ ಆಗಬಾರದು
* ಖಾಸಗಿ ಕಂಪನಿಗಳಲ್ಲಿ ಎಸ್ಸಿ ಎಸ್ಟಿ ಒಬಿಸಿ ವರ್ಗದವರಿಗೆ ಮೀಸಲಾತಿ ವ್ಯವಸ್ಥೆ ಮಾಡಬೇಕು
* ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ರೂಪಿಸಬೇಕು.
* ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ (ರಾಷ್ಟ್ರೀಯ ಜನ ನೊಂದಣಿ) ಜಾರಿ ಮಾಡಬಾರದು.
* ಹಳೆಯ ಪಿಂಚಣಿ ಯೋಜನೆ ಮರಳಿ ತರಬೇಕು.
* ಪರಿಸರ ರಕ್ಷಣೆ ಹೆಸರಿನಲ್ಲಿ ಬುಡಕಟ್ಟು ಜನರನ್ನು ವಾಸಸ್ಥಳದಿಂದ ತೆರವುಗೊಳಿಸಬಾರದು.
* ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರ ವಿರುದ್ಧ ರೂಪಿಸಲಾಗಿದ್ದ ಕಾನೂನುಗಳನ್ನು ಹಿಂಪಡೆಯಬೇಕು.
* ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯ ಮಾಡಬಾರದು.