
ವಿಶಾಖಪಟ್ಟಣ: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಹೆಸರು ಬದಲಾವಣೆಗೆ ವಿರೋಧಿಸಿ ನಡೆದ ಹೋರಾಟವು ಮಂಗಳವಾರ ಹಿಂಸೆಗೆ ತಿರುಗಿದ್ದು, ಸಚಿವರು ಮತ್ತು ಶಾಸಕರ ಮನೆಗೇ ಹೋರಾಟಗಾರರು ಬೆಂಕಿ ಹಚ್ಚಿದ್ದಾರೆ.
ಅಮಲಾಪುರಂನ ಸಾರಿಗೆ ಸಚಿವ ವಿಶ್ವರೂಪ್ ಅವರ ಮನೆಯು ಪ್ರತಿಭಟನಕಾರರ ಆಕ್ರೋಶಕ್ಕೆ ಆಹುತಿ ಯಾಗಿದೆ.
ಮನೆ ಸಮೀಪ ನಿಲ್ಲಿಸಲಾಗಿದ್ದ ವಾಹನ ಗಳನ್ನೂ ಧ್ವಂಸ ಮಾಡಲಾಗಿದೆ. ಮನೆಯಲ್ಲಿದ್ದ ಎಲ್ಲ ಪೀಠೊಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅದೇ ರೀತಿ ಮುಮ್ಮಿಡಿವರಂ ಶಾಸಕ ಪೊನ್ನಾಡ ಸತೀಶ್ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.
ಅಮಲಾಪುರಂನಲ್ಲಿ “ಕೋನಸೀಮಾ ಸಾಧನ ಸಮಿತಿ’, “ಕೋನಸೀಮಾ ಪರಿರಕ್ಷಣ ಸಮಿತಿ’ ಸೇರಿ ಅನೇಕ ಸಂಘಟನೆಗಳು ನಡೆಸಿದ ಪ್ರತಿಭಟನೆ ಮಂಗಳವಾರ ಏಕಾಏಕಿ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಕಾಲೇಜು ಬಸ್ ಹಾಗೂ 2 ಸರಕಾರಿ ಬಸ್ಗಳನ್ನು ಸುಟ್ಟುಹಾಕಲಾಗಿದೆ. 20 ಪೊಲೀಸರು, 40 ಪ್ರತಿಭಟನಕಾರರು ಗಾಯಗೊಂಡಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಏಕೆ ಈ ಹೋರಾಟ? ಕೋನಸೀಮಾ ಜಿಲ್ಲೆಯನ್ನು “ಡಾ| ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ’ ಯೆಂದು ಮರುನಾಮಕರಣ ಮಾಡುವ ಪ್ರಸ್ತಾವ ವನ್ನು ರಾಜ್ಯ ಸರಕಾರ ಇತ್ತೀಚೆಗೆ ಮಾಡಿತ್ತು. ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿದ್ದರೆ ಅದನ್ನು 30 ದಿನಗಳೊಳಗೆ ಸಲ್ಲಿಸಲು ಸೂಚಿಸಲಾಗಿತ್ತು. ಜಿಲ್ಲೆಯ ಹೆಸರು ಬದಲಾವಣೆ ಮಾಡಬಾರದು ಎಂದು ಜಿಲ್ಲೆಯ ಹಲವು ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಅದು ಈಗ ಹಿಂಸಾಚಾರಕ್ಕೆ ಬಂದು ತಲುಪಿದೆ.