ಹಿಜಾಬ್ ಧರಿಸಿ ಕಾಲೇಜಿಗೆ ಬಂದ 11 ಮಂದಿ ವಾಪಸ್

ಮಂಗಳೂರು: ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ 11 ಮಂದಿ ವಿದ್ಯಾರ್ಥಿನಿಯರು ಶನಿವಾರ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು ಅವರನ್ನು ವಾಪಸ್ ಕಳುಹಿಸಲಾಗಿದೆ.
ಹಿಜಾಬ್ ಧರಿಸಿಯೇ ತರಗತಿ ಪ್ರವೇಶಿಸಲು ಮುಂದಾದಾಗ ಪ್ರಾಂಶುಪಾಲರು ಅವಕಾಶ ನೀಡಲಿಲ್ಲ.
ವಿದ್ಯಾರ್ಥಿನಿಯರು ಗ್ರಂಥಾಲಯದತ್ತ ತೆರಳಿದರು. ಆಗ ಪ್ರಾಂಶುಪಾಲರು ವಿದ್ಯಾರ್ಥಿ ನಿಯರಿಗೆ ನ್ಯಾಯಾಲಯದ ಆದೇಶದ ಕುರಿತು ಮನವರಿಕೆ ಮಾಡಿದರು. ಬಳಿಕ ಅವರನ್ನು ಕಾಲೇಜಿನ ಕ್ಯಾಂಪಸ್ನಿಂದ ಹೊರಗೆ ಕಳುಹಿಸಲಾಯಿತು.
ಶಾಸಕರ ಅಸಮಾಧಾನ
ಹಿಜಾಬ್ ವಿವಾದ ಮರುಕಳಿಸಿರುವುದಕ್ಕೆ ಶಾಸಕ ವೇದವ್ಯಾಸ ಕಾಮತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಆದೇಶ ಪಾಲನೆ ಅಗತ್ಯ. ಆದೇಶ ಉಲ್ಲಂಘನೆಯಾದರೆ ಸಂಬಂಧ ಪಟ್ಟವರು ಹೊಣೆಗಾರರಾಗುತ್ತಾರೆ. ಶಿಕ್ಷಣದಿಂದ ವಿದ್ಯಾರ್ಥಿನಿಯರು ವಂಚಿತರಾಗಬಾರದು ಎಂಬ ಕಾರಣಕ್ಕೆ ಪ್ರಾಂಶುಪಾಲರು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.