Monkeypox: ಮತ್ತಷ್ಟು ಹೆಚ್ಚಲಿದೆ ಮಂಕಿಪಾಕ್ಸ್, ಎಚ್ಚರವಾಗಿರಿ! ಎಲ್ಲಾ ದೇಶಗಳಿಗೆ WHO ಸೂಚನೆ

ಮಂಕಿಪಾಕ್ಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಮಂಕಿಪಾಕ್ಸ್ ಕುರಿತಂತೆ ಎಚ್ಚರಿಕೆ ವಹಿಸುವಂತೆ ಎಲ್ಲಾ ದೇಶಗಳ ಆರೋಗ್ಯ ಇಲಾಖೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಮಟ್ಟಕ್ಕೆ ಸೋಂಕು ಹರಡುವ ಆತಂಕವಿದೆ ಅಂತ ಡಬ್ಲ್ಯೂಎಚ್ಒ ಹೇಳಿದೆ. ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾದ 11 ದೇಶಗಳಲ್ಲಿ ಈ ಸೋಂಕು ಅಂತ್ಯದ ಹಂತದಲ್ಲಿದೆ.
ವಿಶ್ವದ 11 ದೇಶಗಳಿಗೆ ಹಬ್ಬಿದ ಸೋಂಕು
ಇದೀಗ ವಿಶ್ವದ 11 ದೇಶಗಳಲ್ಲಿ 200ಕ್ಕೂ ಹೆಚ್ಚು ಪ್ರಕರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ. ಇನ್ನು 50 ಕೇಸ್ಗಳು ಪತ್ತೆಯಾಗಿದ್ದು, ಅದಿನ್ನೂ ಮಂಕಿಪಾಕ್ಸ್ ಹೌದೋ, ಅಲ್ಲವೋ ಎನ್ನುವುದರ ಬಗ್ಗೆ ದೃಢೀಕರಣಗೊಂಡಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ಯುರೋಪ್ನ 9 ದೇಶಗಳಲ್ಲಿ ಸೋಂಕು ಖಚಿತವಾಗಿದೆ. ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾಗಳಲ್ಲಿ ಮಂಕಿಪಾಕ್ಸ್ ಬಹಳ ಸಾಮಾನ್ಯ ಸೋಂಕಾಗಿದೆ.
ಮಂಕಿಪಾಕ್ಸ್ ಕೋವಿಡ್ ಸೋಂಕಿಗಿಂತ ಭಿನ್ನ
ಮಂಕಿಪಾಕ್ಸ್ COVID-19 ಗಿಂತ ವಿಭಿನ್ನವಾಗಿ ಹರಡುತ್ತದೆ. ಜನರು ತಮ್ಮ ಸಮುದಾಯದಲ್ಲಿ ಯಾವುದಾದರೂ ರೋಗಲಕ್ಷಣಗಳು ಇದ್ದರೆ ಜಾಗ್ರತೆವಹಿಸಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದರ ಲಕ್ಷಣಗಳೇನು?
ಮಂಕಿಪಾಕ್ಸ್ ಒಂದು ವೈರಲ್ ಝೂನೋಸಿಸ್ ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುವ ರೋಗಲಕ್ಷಣಗಳಿಗೆ ಹೋಲುತ್ತದೆ. ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿರುತ್ತದೆ. WHO ಪ್ರಕಾರ, ಮಂಕಿಪಾಕ್ಸ್ ವಿಶಿಷ್ಟವಾಗಿ ಜ್ವರ, ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳೊಂದಿಗೆ ಪ್ರಾಯೋಗಿಕವಾಗಿ ಪ್ರಸ್ತುತಪಡಿಸುತ್ತದೆ. ಮಂಕಿಪಾಕ್ಸ್ ಸಾಮಾನ್ಯವಾಗಿ 2 ರಿಂದ 4 ವಾರಗಳವರೆಗೆ ರೋಗಲಕ್ಷಣಗಳೊಂದಿಗೆ ಸ್ವಯಂ-ಸೀಮಿತ ರೋಗವಾಗಿದೆ.
1958ರಲ್ಲೇ ಮೊದಲ ಪ್ರಕರಣ ಪತ್ತೆ
ಮಂಕಿಪಾಕ್ಸ್ ಸೋಂಕು 1958ರಲ್ಲಿ ಮೊದಲ ಬಾರಿಗೆ ಈ ವೈರಸ್ ಸಂಶೋಧನೆಗೆಂದು ಇರಿಸಿಕೊಂಡಿದ್ದ ಮಂಗಗಳಲ್ಲಿ ಕಂಡುಬಂದಿತ್ತು. 1970ರಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಪ್ರಕರಣ ಪತ್ತೆಯಾಗಿತ್ತು.
ನಿಧಾನಕ್ಕೆ ಹೆಚ್ಚುತ್ತಿದೆ ಮಂಕಿಪಾಕ್ಸ್ ಸೋಂಕು
ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದಲ್ಲಿ ಮಂಕಿಪಾಕ್ಸ್ ಸೋಂಕು ಹೆಚ್ಚುತ್ತಿದ್ದು, ವಿಶ್ವದಾದ್ಯಂತ ವರದಿಯಾದ ಪ್ರಕರಣಗಳ ಸಂಖ್ಯೆ 219 ತಲುಪಿದೆ ಎಂದು ಐರೋಪ್ಯ ಒಕ್ಕೂಟ ಹೇಳಿದೆ. ಐರ್ಲೆಂಡ್ನಲ್ಲಿ ಶುಕ್ರವಾರ ಮೊದಲ ಕೇಸ್ ವರದಿಯಾಗಿದೆ. ಅರ್ಜೆಂಟೀನಾ, ಇಟಲಿಯಲ್ಲೂ ಹೊಸ ಕೇಸ್ಗಳು ವರದಿಯಾಗಿವೆ. ಈಗಾಗಲೇ ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ಇರಿಸಲು ಕ್ರಮ ಕೈಗೊಳ್ಳಲಾಗಿದೆ.