ಪಿಎಂ ಕೇರ್ಸ್ ಮಕ್ಕಳ ಯೋಜನೆಗೆ ಪ್ರಧಾನಿ ಮೋದಿ ನೆರವು ಬಿಡುಗಡೆ

ನವದೆಹಲಿ, ಮೇ 30: ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿರುವ ಮಕ್ಕಳಿಗಾಗಿ ಕೇಂದ್ರ ಸರಕಾರ ರೂಪಿಸಿರುವ PM CARES for Children ಯೋಜನೆಗೆ ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹೆಲ್ತ್ ಕಾರ್ಡ್ ಸೇರಿದಂತೆ ವಿವಿಧ ನೆರವು ಬಿಡುಗಡೆ ಮಾಡಲಿದ್ದಾರೆ.
ವಿಡಿಯೋ ಕಾನ್ಫೆರೆನ್ಸ್ ಮೂಲಕ ಸೋಮವಾರ ಬೆಳಗ್ಗೆ 10:30ಕ್ಕೆ ಯೋಜನೆಯ ವಿವಿಧ ಸಹಾಯ ಬಿಡುಗಡೆ ಮಾಡುವುದಾಗಿ ಪ್ರಧಾನಿ ಭಾನುವಾರ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
“ಮೇ 30, ನಾಳೆ ಬೆಳಗ್ಗೆ 10:30ಕ್ಕೆ ಪಿಎಂ ಕೇರ್ಸ್ನ ಮಕ್ಕಳ ಯೋಜನೆಯ ಅಡಿಯಲ್ಲಿ ಸಹಾಯ ಬಿಡುಗಡೆ ಮಾಡುತ್ತೇನೆ. ಕೋವಿಡ್-೧೯ ಕಾಯಿಲೆಗೆ ತಮ್ಮ ಪೋಷಕರನ್ನು ಕಳೆದುಕೊಂಡವರಿಗೆ ನಾನು ಈ ಯೋಜನೆ ಮೂಲಕ ನೆರವು ಒದಗಿಸುತ್ತಿದ್ದೇವೆ” ಎಂದು ಭಾನುವಾರ ಸಂಜೆ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
ಕೋವಿಡ್ನಿಂದ ತಂದೆ ತಾಯಿ ಕಳೆದುಕೊಂಡು ಅನಾಥವಾಗಿರುವ ಶಾಲಾ ಮಕ್ಕಳಿಗೆ ಪ್ರಧಾನಿ ವಿದ್ಯಾರ್ಥಿವೇತನ ಸೌಲಭ್ಯ ಒದಗಿಸಲಿದ್ದಾರೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ನ ಪಾಸ್ಬುಕ್, ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯ ಹೆಲ್ತ್ ಕಾರ್ಡ್ ಇತ್ಯಾದಿಗಳನ್ನು ಒದಗಿಸಲಾಗುವುದು ಎಂದು ಪಿಎಂಒ ಕಚೇರಿ ಹೇಳಿದೆ.
ಏನಿದು ಯೋಜನೆ?
ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಒಂದೇ ಕುಟುಂಬದ ಹಲವು ಮಂದಿ ಸಾವನ್ನಪ್ಪಿ ಅನೇಕ ಮಕ್ಕಳು ಅನಾಥವಾಗಿರುವ ಕರುಣಾಜನಕ ಪರಿಸ್ಥಿತಿ ಕಳೆದೆರಡು ವರ್ಷದಲ್ಲಿ ಉದ್ಭವಿಸಿದೆ. ಇಂಥ ಸಂತ್ರಸ್ತ ಮಕ್ಕಳ ನೆರವಿಗೆಂದು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಕೇಂದ್ರ ಸರಕಾರ 2021 ಮೇ 29ರಂದು ಆರಂಭಿಸಿದೆ. ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ 2020 ಮಾರ್ಚ್ 11ರಿಂದ 2022 ಫೆಬ್ರವರಿ 28ರ ಅವಧಿಯಲ್ಲಿ ಮಗುವಿನ ತಂದೆ-ತಾಯಿ ಅಥವಾ ಅಧಿಕೃತ ಪೋಷಕರು ಅಥವಾ ದತ್ತು ಪೋಷಕರು ಸಾವನ್ನಪ್ಪಿದ್ದರೆ ಅಂಥ ಮಕ್ಕಳಿಗೆ ಇಂದು ಯೋಜನೆಯ ಫಲವನ್ನು ನೀಡಲಾಗುತ್ತಿದೆ. ಕಳೆದ ವರ್ಷ ಕೇಂದ್ರ ಸರಕಾರ ಇಂಥ ಮಕ್ಕಳನ್ನು ನೊಂದಾಯಿಸಲು ಆನ್ಲೈನ್ ಪೋರ್ಟಲ್ ಆರಂಭಿಸಿತ್ತು.
ಏನೇನು ಫಲ?
ಸಂತ್ರಸ್ತ ಮಕ್ಕಳು ವಯಸ್ಸಿಗೆ ಬರುವವರೆಗೂ ಸರಕಾರ ಬಹಳಷ್ಟು ಯೋಗಕ್ಷೇಮದ ವ್ಯವಸ್ಥೆ ಮಾಡುತ್ತದೆ. ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡುತ್ತದೆ. ವಿದ್ಯಾರ್ಥಿವೇತನ ಒದಗಿಸುತ್ತದೆ. ವಸತಿ, ಆಹಾರದ ವ್ಯವಸ್ಥೆ ಮಾಡುತ್ತದೆ. ಹೆಲ್ತ್ ಇನ್ಷೂರೆನ್ಸ್ ಮೂಲಕ ಆರೋಗ್ಯದ ಯೋಗಕ್ಷೇಮ ನೋಡಿಕೊಳ್ಳಲಿದೆ. ಬಾಧಿತ ಮಗು 23 ವರ್ಷ ವಯಸ್ಸಿಗೆ ಬಂದ ಬಳಿಕ 10 ಲಕ್ಷ ರೂ ಹಣಕಾಸು ನೆರವು ನೀಡುತ್ತದೆ.