ದಕ್ಷಿಣ ಕಾಶಿ ಎಂದು ನಮ್ಮ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಪ್ರತೀತಿ ಇದೆ. AIMIM ಮುಖಂಡ ಲತೀಫ್ಖಾನ್ ಹೊಸ ಬಾಂಬ್
ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಎಂಐಎಂ ಮುಖಂಡ ಲತೀಫ್ಖಾನ್ ಹೊಸ ಬಾಂಬ್

ದಕ್ಷಿಣ ಕಾಶಿ ಎಂದು ನಮ್ಮ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಪ್ರತೀತಿ ಇದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣ ಏನು..? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್ಖಾನ್ ಪಠಾಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಐಎಂ ಮುಖಂಡ ಲತೀಫ್ಖಾನ್ ಪಠಾಣ ಈಗಾಗಲೇ ಸಾಕಷ್ಟು ಬಾರಿ ನಾನು ಹೇಳಿದ್ದೇನೆ. 25-30 ವರ್ಷಕ್ಕಿಂತ ಮೊದಲು ಆರ್ಎಸ್ಎಸ್ನವರು ಇಡೀ ಭಾರತದಲ್ಲಿ ಈ ರೀತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ವಿಷಯವನ್ನು ಮುನ್ನೆಲೆಗೆ ತರಬೇಕು. ಜನರ ದಾರಿ ತಪ್ಪಿಸಬೇಕು ಎಂಬುದು ಅವರ ಹಿಡನ್ ಅಜೆಂಡಾ ಆಗಿದೆ. ಆ ಪ್ರಕಾರ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಔಷಧಿ, ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆಯಿದೆ. 2023-24 ಚುನಾವಣೆಯಲ್ಲಿ ಜನರಿಗೆ ಏನು ಹೇಳಬೇಕು ಎಂಬುದು ಅವರ ಬಳಿ ಇಲ್ಲ. ಹೀಗಾಗಿ ಜಾತಿ ಗದ್ದಲ ಎಬ್ಬಿಸಿದ್ರೆ ನಾವು ಇದರಿಂದ ಉಳಿದುಕೊಳ್ಳಬಹುದು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.
91ರ ಕಾನೂನು ಪ್ರಕಾರ ಹಳೆಯ ಆರಾಧನಾ ಕಟ್ಟಡಗಳು ಯಥಾಸ್ಥಿತಿಯಲ್ಲಿ ಇರಬೇಕು ಎಂಬುದು ಕಾನೂನು ಇದೆ. ಆದರೆ ಇದೆಲ್ಲಾವೂ ಇದ್ದರೂ ಕೂಡ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯ ಯಾವ ರೀತಿ ನಿರ್ಣಯ ಕೊಡುತ್ತೋ ಅದಕ್ಕೆ ನಾವು ಬದ್ಧ ಎಂದು ಹೇಳಿದ್ದೇವು. ಅದೇ ರೀತಿ ಅಯೋಧ್ಯೆ ತೀರ್ಪನ್ನು ಯಾವುದೇ ಗಲಭೆ ಇಲ್ಲದೇ ನಾವು ಒಪ್ಪಿಕೊಂಡಿದ್ದೇವೆ. ಇಷ್ಟಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿಳಿದುಕೊಂಡು ಅದನ್ನೇ ಮುಂದುವರಿಸುತ್ತಿದ್ದಾರೆ.
ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸಂವಿಧಾನ ವಿರೋಧವೇ. ಇದು ಕೊರೊನಾಗಿಂತ ದೊಡ್ಡ ಭಯಾನಕ ರೋಗವಾಗಿದೆ. ಕೊರೊನಾ ರೋಗಕ್ಕೆ ಜಗತ್ತಿನ ಎಲ್ಲ ವೈದ್ಯರು ಬೆನ್ನು ಹತ್ತಿ ಔಷಧಿ ಕಂಡು ಹಿಡಿದರು. ಆದರೆ ಈ ರೋಗಕ್ಕೆ ಔಷಧಿ ಕಂಡು ಹಿಡಿಯುವವರು ಮಾನಸಿಕ ರೋಗಿಗಳಾಗಿದ್ದಾರೆ ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್ಖಾನ್ ಪಠಾಣ ಆರೋಪಿಸಿದರು.
3 ಸಾವಿರ ವರ್ಷಗಳ ಹಿಂದೆ ನೋಡಿದ್ರೆ ಬೇರೆ ಬೇರೆ ಧರ್ಮಗಳು ಬೇರೆ ಧರ್ಮಗಳ ಮೇಲೆ ದಾಳಿ ಮಾಡಿ ತಮ್ಮ ಧರ್ಮಗಳನ್ನು ಪ್ರಚಾರ ಮಾಡಿದ್ದಾರೆ. ಈಗ 700-800 ವರ್ಷಗಳ ಹಳೆಯ ವಿಚಾರಗಳನ್ನು ಎತ್ತಿಕೊಂಡು ಈಗಿನ ವಾತಾವರಣ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಯಾರಿಗೂ ಹಿತಕರ ಬೆಳವಣಿಗೆ ಅಲ್ಲ. ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬೆಳಗಾವಿ ಒಂದು ಕೇಂದ್ರ ಸ್ಥಳವಾಗಿದೆ. ಆದರೂ ಇಲ್ಲಿ ಯಾವ ವ್ಯಾಪಾರಿಗಳೂ ಇಲ್ಲಿ ಹೂಡಿಕೆ ಮಾಡಲು ಬರುತ್ತಿಲ್ಲ. ಇಂತಹ ವಿವಾದಗಳನ್ನು ಸೃಷ್ಟಿ ಮಾಡಿ ತಮ್ಮದೇಯಾದ ರಾಜಕೀಯ ಮಾಡುತ್ತಿದ್ದಾರೆ. ಇದು ರಾಜಕೀಯಕ್ಕೆ ಸಿಮೀತವಾಗಿದೆ. ಜನರ ಮನಸ್ಸಿನಲ್ಲಿ ಇದು ಯಾವುದೂ ಇಲ್ಲ. ಇದನ್ನು ಬಿಟ್ಟು 2023-24ರ ಚುನಾವಣೆ ಗೆಲ್ಲಲು ಇವರಿಗೆ ಸಾಧ್ಯವಿಲ್ಲ ಎಂದು ಆರೋಪಿಸಿದರು.
ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ ಎಂದು ಅಭಯ್ ಪಾಟೀಲ್ ಹೇಳುತ್ತಾರೆ. ನಾನು ಕೂಡ ಹಿರಿಯರು ಹೇಳಿದಂತೆ ಹೇಳುತ್ತಿದ್ದೇನೆ. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಎಂಬ ಮಾತಿದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣ ಏನು..? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು..? 1300 ವರ್ಷಗಳ ಹಿಂದಿನ ಬೆಳಗಾವಿಯ ಕೋಟೆಯನ್ನು ಒಮ್ಮೆ ಸರ್ವೇ ಮಾಡಿಸಬೇಕು.. ಯಾವ ಸಮುದಾಯದವರು ಅದನ್ನು ಕೆಡವಿದ್ದಾರೆ ಎನ್ನುವುದನ್ನು ಸರ್ವೇ ಮಾಡಬೇಕು. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಕೆಡವಿ ಕೋಟೆ ಕೊಟ್ಟಿದ್ದಾರೆ. ಸಾಕಷ್ಟು ರಾಜ ಮನೆತನಗಳು ಈ ಭಾಗವನ್ನು ಆಳಿದ್ದಾರೆ. ಅದನ್ನು ಯಾರು ಕೆಡವಿದರು ಎಂಬುದು ತನಿಖೆ ಆಗಲಿ ಎಂದು ಆಗ್ರಹಿಸಿದರು.