ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ಘಟನೆ!
ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದನ್ನು ವೀಡಿಯೊ ಮಾಡಿದ್ದಕ್ಕೆ ಆಕ್ರೋಶಗೊಂಡು ಸ್ನೇಹಿತ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಆಸಿಡ್ ದಾಳಿಯಿಂದ ಆತಂಕಗೊಂಡಿದ್ದ ಬೆಂಗಳೂರಿನಲ್ಲಿ ಮತ್ತೆ ಘಟನೆ ಮರುಕಳಿಸಿರುವುದು ಆತಂಕ ಹೆಚ್ಚಿಸಿದೆ.
ಬೆಂಗಳೂರಿನ ಕಬ್ಬನ್ ಪೇಟೆ 10ನೇ ಕ್ರಾಸ್ನಲ್ಲಿ ಸೋಮವಾರ ರಾತ್ರಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ತನ್ನ ಸ್ನೇಹಿತನಿಗೆ ಆಯಸಿಡ್ ಎರಚಿದ್ದಾನೆ.
ಜನತಾ ಅದಕ್ ಹಾಗೂ ಸಂತ್ರಸ್ತ ಸಾಂತ್ರಾ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಆದರೆ ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿತ್ತು. ಜನತಾ ಅದಕ್ ಹಾಗೂ ಸಂತ್ರಸ್ತ ಕುಡಿದು ಗಲಾಟೆ ಮಾಡಿಕೊಂಡಿದ್ದರು.
ಈ ವೇಳೆ ಸಂತ್ರಸ್ತ ಮೊಬೈಲ್ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದ. ಇದರಿಂದ ಕೋಪಗೊಂಡ ಜನತಾ ಅದಕ್ ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟ್ ಆಯಸಿಡ್ ಎರಚಿದ್ದಾನೆ. ಘಟನೆಯಲ್ಲಿ ಸಂತ್ರಸ್ತ ಸಾಂತ್ರಾನ ಮುಖ, ಎದೆ ಗಾಯವಾಗಿದ್ದು, ಶೇ.30ರಷ್ಟು ಸುಟ್ಟಿದೆ.
ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜನತಾ ಅದಕ್ನನ್ನು ಮೈಸೂರು ಬಳಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗಷ್ಟೇ ಯುವತಿ ಮೇಲೆ ಯುವಕನೊಬ್ಬ ಆಯಸಿಡ್ ದಾಳಿ ಮಾಡಿ ವಿಕೃತಿ ಮೆರೆದಿದ್ದ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಪ್ರೀತಿಸಿದ ಹುಡುಗಿಯ ಮೇಲೆ ಆಸಿಡ್ ದಾಳಿ ಮಾಡಿರುವ ದುರಂತ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿತ್ತು. 23 ವರ್ಷದ ಸಂತ್ರಸ್ಥೆಯ ಮೇಲೆ ಸುಂಕದಕಟ್ಟಯ ಮುತ್ತೂಟು ಫಿನ್ಕಾರ್ಪ್ ಬಳಿ ಹುಚ್ಚು ಪ್ರೇಮಿ ನಾಗೇಶ್ ಆಸಿಡ್ ದಾಳಿ ನಡೆಸಿದ್ದ.