ರಾಜ್ಯಸಭಾ ಅಖಾಡಕ್ಕಿಳಿದ 6 ಜನರ ಆಸ್ತಿ ವಿವರ ಇಲ್ಲಿದೆ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ನಿರೀಕ್ಷೆಯಂತೆ ಆಡಳಿತ ಬಿಜೆಪಿಯಿಂದ ಮೂವರು, ಜೆಡಿಎಸ್ನಿಂದ ಒಬ್ಬರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಗಡುವು ಮುಗಿದಿದ್ದು, 4 ಸ್ಥಾನಕ್ಕೆ ಮೂರು ಪಕ್ಷಗಳಿಂದ 6 ಆಕಾಂಕ್ಷಿಗಳು ಕಣಕ್ಕಿಳಿಯುವುದರೊಂದಿಗೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತೆರೆಮರೆ ಆಟ ಶುರುವಾಗಿದೆ.
ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳು ಆಸ್ತಿವಿವರ ಘೋಷಿಸಿಕೊಂಡಿದ್ದಾರೆ.
576 ಕೋಟಿ ರೂ. ಆಸ್ತಿ ಒಡೆಯ ಕುಪೇಂದ್ರ ರೆಡ್ಡಿ
ಜೆಡಿಎಸ್ನಿಂದ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ನಾಮಪತ್ರದ ಜತೆಗೆ ಆಸ್ತಿ ವಿವರ ನೀಡಿದ್ದು, ಒಟ್ಟು 353.42 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 222,47,60,624 ರೂ. ಮೌಲ್ಯದ ಸ್ತಿರಾಸ್ತಿ ಸೇರಿ 575,89,75,550 ರೂ. ಒಡೆಯರಾಗಿದ್ದಾರೆ. ಕುಪೇಂದ್ರ ರೆಡ್ಡಿ 21,12,381 ರೂ. ನಗದು ಹೊಂದಿದ್ದರೆ, ಅವರ ಪತ್ನಿ ಆರ್.ಪುಷ್ಪಾವತಿ 43,41,108 ರೂ. ಹೊಂದಿದ್ದಾರೆ. ಅವಿಭಕ್ತ ಕುಟುಂಬದಲ್ಲಿ 9,32,408 ರೂ. ನಗದು ಇದೆ.
ವಿವಿಧ ಹೂಡಿಕೆಗಳು: ಬಾಂಡ್, ಷೇರು, ಮ್ಯೂಚುವಲ್ ಫಂಡ್ಗಳಲ್ಲಿ 88.44 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಹೆಸರಿನಲ್ಲಿ 9.06 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ವೈಯಕ್ತಿಕ ಸಾಲ, ಮುಂಗಡ ಸೇರಿ ಒಟ್ಟು 244.46 ಲಕ್ಷ ರೂ. ಮತ್ತು ಪತ್ನಿ ಹೆಸರಿನಲ್ಲಿ 242.18 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 43.95 ಲಕ್ಷ ರೂ. ಇದೆ. 1 ಆಡಿ ಹಾಗೂ 2 ಟೊಯೋಟಾ ಫಾರ್ಚುನರ್ ಕಾರುಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ 1.35 ಕೋಟಿ ರೂ.ಗಳಾಗಿದೆ. ರೆಡ್ಡಿ ಬಳಿ 1.74 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಅವರ ಪತ್ನಿ ಹೆಸರಿನಲ್ಲಿ 3.51 ಕೋಟಿ ರೂ. ಬೆಲೆಯ ಚಿನ್ನಾಭರಣಗಳಿವೆ.
ನಿರ್ಮಲಾಗೆ ಪತಿಯ ಚರ-ಸ್ಥಿರಾಸ್ತಿ ಗೊತ್ತಿಲ್ಲ!
ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಪತಿ ಪ್ರಭಾಕರ್ ಪರಕಳ ಅವರ ವಾರ್ಷಿಕ ಆದಾಯ, ಚರ-ಸ್ಥಿರಾಸ್ತಿ ವಿವರ ಗೊತ್ತಿಲ್ಲ ಎಂಬುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಉಳಿದಂತೆ ಅವರು ಘೋಷಿಸಿದ ಆಸ್ತಿ ವಿವರ ಹೀಗಿದೆ…
* ದೆಹಲಿ ಜವಾಹರಲಾಲ್ ನೆಹರು ವಿವಿಯಲ್ಲಿ ಎಂ.ಫಿಲ್ ವ್ಯಾಸಂಗ
* 2016-17ರಲ್ಲಿ 5.85 ಲಕ್ಷ ರೂ. ಇದ್ದ ವಾರ್ಷಿಕ ಆದಾಯ 2020-21ಕ್ಕೆ 8 ಲಕ್ಷಕ್ಕೆ ಏರಿಕೆ
* ಠೇವಣಿ, ಎಫ್ಡಿ, ದ್ವಿಚಕ್ರ ವಾಹನ, ಕುಟುಂಬ ಸದಸ್ಯರಿಗೆ ನೀಡಿದ ಸಾಲ, ಬಂಗಾರ-ಬೆಳ್ಳಿ ಸೇರಿ 63.39 ಲಕ್ಷ ರೂ. ಮೊತ್ತದ ಚರಾಸ್ತಿ
* ಹೈದರಾಬಾದ್ನಲ್ಲಿನ ಮನೆ-ನಿವೇಶನ ಸೇರಿ 1.87 ಕೋಟಿ ರೂ. ಮೌಲ್ಯದ ಸ್ಥಿರಾಸಿ, 30.44 ಲಕ್ಷ ರೂ. ಸಾಲ.
ಲೆಹರ್ ಸಿಂಗ್ ಸಿರೋಯಿ ಅವರ ಆಸ್ತಿ ವಿವರ
* 2016-17ರಲ್ಲಿ 71.37 ಲಕ್ಷ ರೂ. ಇದ್ದ ವಾರ್ಷಿಕ ಆದಾಯ 2020-21ಕ್ಕೆ 2.11 ಕೋಟಿ ರೂ.ಗೆ ಏರಿಕೆ
* ನಗದು, ಠೇವಣಿ, ವಿವಿಧ ಕಂಪನಿಗಳಲ್ಲಿ ಹೂಡಿಕೆ, ಶೇರು, ಬಂಗಾರ-ಬೆಳ್ಳಿ ಸೇರಿ ಒಟ್ಟು 16.15 ಕೋಟಿ ರೂ. ಮೌಲ್ಯದ ಚರಾಸ್ತಿ
* ನಿವೇಶನ, ಮನೆಗಳು ಸೇರಿ 29.40 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 40.50 ಲಕ್ಷ ರೂ. ಸಾಲ.
* ಪತ್ನಿ ಶಾಂತಬಾಯಿ: 2016-17ರಲ್ಲಿ 18.10 ಲಕ್ಷ ರೂ. ಇದ್ದ ವಾರ್ಷಿಕ ಆದಾಯ 2020-21ರಲ್ಲಿ 41.76 ಲಕ್ಷ ರೂ.ಗೆ ಏರಿಕೆ
* 6.94 ಕೋಟಿ ರೂ. ಮೊತ್ತದ ಚರಾಸ್ತಿ, 88 ಲಕ್ಷ ರೂ. ಸ್ಥಿರಾಸ್ತಿ, 52.50 ಲಕ್ಷ ರೂ. ಸಾಲ
* ಅವಿಭಜಿತ ಕುಟುಂಬದ ಹೆಸರಿನಲ್ಲಿ 1.21 ಕೋಟಿ ರು. ಮೌಲ್ಯದ ಚರಾಸ್ತಿ, 6.50 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ.
ಚಿತ್ರನಟ ಜಗ್ಗೇಶ್ ಆಸ್ತಿ ಎಷ್ಟಿದೆ?
* 1.52 ಕೋಟಿ ರೂ. ಮೌಲ್ಯದ ಐಷಾರಾಮಿ ವಾಹನ, ಠೇವಣಿ, ಬಂಗಾರ-ಬೆಳ್ಳಿ ಸೇರಿ 4.39 ಕೋಟಿ ರೂ. ಮೊತ್ತದ ಚರಾಸ್ತಿ
* 3 ಎಕರೆ ಕೃಷಿ ಜಮೀನು, ನಿವೇಶನ-ಮನೆ ಸೇರಿ 13.25 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 2.91 ಕೋಟಿ ರೂ. ಸಾಲ.
* ಪತ್ನಿ ಪರಿಮಳಾ ಬಳಿ ಠೇವಣಿ, ವಾಹನ, ಶೇರು ಹೂಡಿಕೆ ಸಹಿತ 67.45 ಲಕ್ಷ ರೂ. ಮೌಲ್ಯದ ಚರಾಸ್ತಿ
* ಮನೆ-ನಿವೇಶನ ಸೇರಿ 4.5 ಕೋಟಿ ರೂ. ಮೊತ್ತದ ಸ್ಥಿರಾಸ್ತಿ, 4 ಲಕ್ಷ ರೂ. ಸಾಲ.
ನಂಟು ಉಳಿಸಿಕೊಂಡ ಜೈರಾಮ್
ಮೂಲತಃ ಕರ್ನಾಟಕದವರಾಗಿದ್ದು ಬಹುಕಾಲ ದೆಹಲಿಯಲ್ಲೇ ಇರುವ ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಚಿಕ್ಕಮಗಳೂರಿನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಸಾಕಷ್ಟು ಠೇವಣಿ ಕೂಡ ಇಟ್ಟಿದ್ದಾರೆ. ಒಟ್ಟಾರೆ ಅವರ ಬಳಿ 6 ಖಾತೆಗಳಲ್ಲಿ 90.59 ಲಕ್ಷ ರೂ ಠೇವಣಿ ಇದ್ದು, 45 ಲಕ್ಷ ರೂ.ನ ಚಿನ್ನ, 4.5 ಲಕ್ಷ ಮೌಲ್ಯದ ವಜ್ರ, 1.2 ಲಕ್ಷ ರೂ.ನ ಬೆಳ್ಳಿ ಸಾಮಗ್ರಿಗಳಿವೆ. ಚೆನ್ನೈನಲ್ಲಿ 2 ಮನೆ ಹೊಂದಿದ್ದು, ಅದರ ಮಾರುಕಟ್ಟೆ ದರ 2.84 ಕೋಟಿ ರೂ., 35.47 ಲಕ್ಷ ರೂ. ಸಾಲ ಹೊಂದಿದ್ದಾರೆ.
ಮನ್ಸೂರ್ ಬಳಿ 44 ಕೋಟಿ ರೂ. ಸ್ಥಿರಾಸ್ತಿ
ಮನ್ಸೂರ್ ಆಲಿಖಾನ್ ಬಳಿ 8.39 ಕೋಟಿ ರೂ, ಪತ್ನಿ ಬಳಿ 4.41 ಕೋಟಿ ರೂ. ಮತ್ತು ಇಬ್ಬರ ಅವಲಂಬಿತರ ಬಳಿ 36 ಲಕ್ಷದಷ್ಟು ಚರಾಸ್ತಿ ಇದೆ. 10 ಕಡೆ ಕೃಷಿ ಭೂಮಿ, 9 ಕಡೆ ಕೃಷಿಯೇತರ ಭೂಮಿ, ಐದು ವಸತಿ ಕಟ್ಟಡಗಳು ಸೇರಿ 44 ಕೋಟಿಯಷ್ಟು (ಪತಿ- ಪತ್ನಿ ಸೇರಿ) ಮೌಲ್ಯದ ಸ್ಥಿರಾಸ್ತಿ ಇದೆ. ಸಾಲದ ವಿಚಾರಕ್ಕೆ ಬಂದರೆ ಮನ್ಸೂರ್ ಪತ್ನಿ ಹೆಸರಲ್ಲಿ 2 ಕೋಟಿ ರೂ. ಸಾಲವಿದ್ದರೆ, ಮನ್ಸೂರ್ 1.92 ಲಕ್ಷ ಸಾಲಗಾರರಾಗಿದ್ದಾರೆ. ಅವರ ಬಳಿ 48 ಲಕ್ಷ ರೂ. ಮಿನಿ ಕೂಪರ್ ಹಾಗೂ ಪತ್ನಿ ಬಳಿಕ 1.09 ಕೋಟಿ ಮೌಲ್ಯದ ಬಿಎಂಡಬ್ಲ್ಯು ಮತ್ತು 17.5 ಲಕ್ಷದ ಹುಂಡೈ ಕ್ರೆಟಾ ಕಾರಿದೆ.