Viral Video: ಟ್ರ್ಯಾಕ್ಟರ್ ಚಲಾಯಿಸಿಕೊಂಡು ಮದುವೆ ಮನೆಗೆ ಎಂಟ್ರಿ ಕೊಟ್ಟ ವಧು; ವಿಡಿಯೋ ಕಂಡು ಆನಂದ್ ಮಹಿಂದ್ರಾ ಹೇಳಿದ್ದೇನು ಗೊತ್ತಾ?

ಆದರೆ ಈಗ ಆ ಎರಡು ವರ್ಷದಲ್ಲಿ ಮಿಸ್ ಆದ ಎಲ್ಲಾ ಸಂತೋಷವನ್ನು ಈಗಿನ ಚಿಕ್ಕ ಚಿಕ್ಕ ಸಮಾರಂಭಗಳಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲಿ ಮದುವೆ ಸಮಾರಂಭಗಳಲ್ಲಂತೂ ಕೇಳೋದೇ ಬೇಡ, ವಧು-ವರರು ಆ ಮದುವೆ ದಿನ ತುಂಬಾ ವರ್ಷಗಳವರೆಗೆ ಅವರಿಗೆ ಮತ್ತು ಮದುವೆಗೆ ಬಂದ ಅತಿಥಿಗಳಿಗೆ ನೆನಪಿನಲ್ಲಿ ಉಳಿಯುವಂತೆ ಮಾಡಲು ಮತ್ತು ಅವರ ಆ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿಕೊಳ್ಳಲು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ನಾವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮದುವೆಯ ನಾನಾ ರೀತಿಯ ವೀಡಿಯೋಗಳನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು.
ವಿವಿಧ ರೀತಿಯಲ್ಲಿ ಮದುವೆ ಮನೆಗೆ ಎಂಟ್ರಿ
ಈ ಹಿಂದೆ ನಾವು ವಧು ತನ್ನ ಮದುವೆ ನಡೆಯುವ ಕಲ್ಯಾಣ ಮಂಟಪಕ್ಕೆ ಮತ್ತು ಮದುವೆ ಮನೆಗೆ ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಬಂದಿದ್ದು, ಮೇಲಿಂದ ಹೀಲಿಯಂ ಬಲೂನ್ ಗಳ ರಾಶಿಯಲ್ಲಿ ಕಟ್ಟಿದ ಉಯ್ಯಾಲೆಯಲ್ಲಿ ಕುಳಿತುಕೊಂಡು ಗಾಳಿಯಲ್ಲಿ ಹಾಗೆಯೇ ಇಳಿದು ಬಂದದ್ದು ನಾವು ಅನೇಕ ವೀಡಿಯೋಗಳಲ್ಲಿ ನೋಡಿದ್ದೇವು.
ಟ್ರ್ಯಾಕ್ಟರ್ ನಲ್ಲಿ ಮದುವೆ ಮನೆಗೆ ಬಂದ ವಧು
ಇಲ್ಲೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದ ಒಂದು ವಿಶಿಷ್ಟ ಘಟನೆಯಲ್ಲಿ, ವಧುವೊಬ್ಬಳು ತನ್ನ ಮದುವೆಗಾಗಿ ಟ್ರ್ಯಾಕ್ಟರ್ ನಲ್ಲಿ ಬಂದಿದ್ದಾಳೆ. ಸಾಮಾನ್ಯವಾಗಿ, ಭಾರತೀಯ ವಿವಾಹಗಳ ವಿಷಯಕ್ಕೆ ಬಂದಾಗ, ವಧು ಕಾರಿನಲ್ಲಿ ಬರುತ್ತಾರೆ. ಆದರೆ ಇಲ್ಲಿ ಭಾರತಿ ಟಾರ್ಗೆ ಎಂಬ ವಧು ತನ್ನ ಮದುವೆಯ ಸ್ಥಳಕ್ಕೆ ಪಕ್ಕಾ ಲೋಕಲ್ ಮತ್ತು ದೇಸಿ ಶೈಲಿಯಲ್ಲಿ ಆಗಮಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇಡೀ ಕ್ಷಣದ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ.
ವಿಡಿಯೋ ವೈರಲ್
ಈ ವೀಡಿಯೋ ಎಷ್ಟು ವೈರಲ್ ಆಗಿದೆ ಎಂದರೆ ಭಾರತಿ ಮಹೀಂದ್ರಾ ಸ್ವರಾಜ್ ಟ್ರ್ಯಾಕ್ಟರ್ ನಲ್ಲಿ ಆಗಮಿಸುತ್ತಿರುವ ವೀಡಿಯೋ ನೋಡಿ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಕೂಡ ಈ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಭಾರತಿ, ಟ್ರ್ಯಾಕ್ಟರ್ ನಲ್ಲಿ ತನ್ನ ಮದುವೆಗೆ ಸ್ವ್ಯಾಗ್ ನೊಂದಿಗೆ ಆಗಮಿಸಿದರು. ಅವಳು ಕೆಂಪು ಕಸೂತಿ ಮಾಡಿದ ಲೆಹೆಂಗಾ ಮತ್ತು ಕಪ್ಪು ಸನ್ ಗ್ಲಾಸ್ ಅನ್ನು ಧರಿಸಿದ್ದಳು, ಟ್ರ್ಯಾಕ್ಟರ್ ಅನ್ನು ಸ್ವತಃ ತಾವೇ ಮದುವೆ ನಡೆಯುವ ಸ್ಥಳಕ್ಕೆ ಚಲಾಯಿಸಿಕೊಂಡು ತಂದರು. ಮೇ 25 ರಂದು ವಾಸು ಕವಾಡ್ಕರ್ ಅವರೊಂದಿಗೆ ಅವರ ವಿವಾಹ ನಡೆಯಿತು ಎಂದು ಹೇಳಲಾಗುತ್ತಿದೆ.
ಆನಂದ್ ಮಹೀಂದ್ರಾ ಪ್ರತಿಕ್ರಿಯೆ
ಆನಂದ್ ಮಹೀಂದ್ರಾ ಅವರು ಮಂಗಳವಾರ ಟ್ವಿಟ್ಟರ್ ನಲ್ಲಿ ಭಾರತಿ ಅವರ ವೈರಲ್ ವೀಡಿಯೋ ನೋಡಿ “ಭಾರತಿ ಎಂಬ ಹೆಸರಿನ ವಧು ಸ್ವರಾಜ್ (ಮಹೀಂದ್ರಾ ಬ್ರ್ಯಾಂಡ್) ಅನ್ನು ಚಾಲನೆ ಮಾಡುತ್ತಾಳೆ. ಇದು ತುಂಬಾನೇ ಅರ್ಥಪೂರ್ಣವಾಗಿದೆ” ಎಂದು ಕೈಗಾರಿಕೋದ್ಯಮಿ ಪ್ರತಿಕ್ರಿಯಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಟ್ರ್ಯಾಕ್ಟರ್ ಗಳು ಸುಲಭವಾಗಿ ಲಭ್ಯವಿವೆ ಮತ್ತು ಅದನ್ನು ಹೇಗೆ ಓಡಿಸಬೇಕೆಂದು ತನಗೆ ತಿಳಿದಿದೆ ಎಂದು ಭಾರತಿ ಹೇಳಿದರು. ಆದ್ದರಿಂದ, ಅವಳು ಟ್ರ್ಯಾಕ್ಟರ್ ನಲ್ಲಿ ತನ್ನ ಮದುವೆಗೆ ಹೋಗಲು ಮತ್ತು ಅತಿಥಿಗಳನ್ನು ಬೆರಗುಗೊಳಿಸುವ ಯೋಜನೆ ಹಾಕಿಕೊಂಡಿದ್ದರು ಮತ್ತು ಅತಿಥಿಗಳು ಸಹ ಆಕೆಯನ್ನು ತುಂಬಾನೇ ಉತ್ಸಾಹದಿಂದ ಸ್ವಾಗತಿಸಿದರು.