ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ತನಿಖೆಗೆ ಆಗ್ರಹಿಸಿದ AAP

ಬೆಂಗಳೂರು, ಜೂನ್ 2: ಭ್ರಷ್ಟಾಚಾರದ ವಿರುದ್ದದ ಹೋರಾಟವೇ ತಮ್ಮ ಮೂಲ ಧ್ಯೇಯ ಎಂದು ಹೋರಾಡುತ್ತಿರುವ ಆಮ್ ಆದ್ಮಿ ಪಕ್ಷ ನೈತಕತೆಯ ಪ್ರಶ್ನೆ ಎದುರಾಗಿದೆ. ಪಂಜಾಬ್ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕೂಡಲೇ ತನಿಖೆಯನ್ನು ನಡೆಸದೇ ಸಚಿವರನ್ನು ವಜಾ ಮಾಡಿ ದೇಶಕ್ಕೊಂದು ಸಂದೇಶವನ್ನು ಸಾರಿತ್ತು.
ರಾಜ್ಯದಲ್ಲಿ ಯಾರೇ ಭ್ರಷ್ಟಾಚಾರ ಎಸಗಿದ ಸುದ್ದಿ ಗೊತ್ತಾದರೂ ಬಂಧಿಸುವಂತೆ ಹೋರಾಟವನ್ನು ಮಾಡುತ್ತೆ. ಆದರೆ ರೈತ ಸಂಘದ ಅಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ಪಕ್ಷವನ್ನು ಸೇರಿದ್ದಾರೇ ಅನ್ನೋ ಕಾರಣಕ್ಕೋ ಏನೋ ಬಿಜೆಪಿಗೆ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತಿದೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಪ್ಪು ಮಾಡಿರುವುದು ನಿಜವೇ ಆಗಿದ್ದರೆ ಸೂಕ್ತ ತನಿಖೆಯಿಂದ ಸತ್ಯವನ್ನು ಬಯಲಿಗೆಳೆಯಲಿ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸವಾಲು ಹಾಕಿದರು.
ಡೀಲ್ ಆಗಿದ್ದರೇ ಬಿಜೆಪಿಯವರು ಆರೋಪಿಗಳು
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿ ವಿರುದ್ಧ ಬಿಜೆಪಿಯ ಮುಖಂಡ ಅಮಿತ್ ಮಾಳವೀಯ ಮಾಡಿರುವ ಟ್ವೀಟ್ಗೆ ಪೃಥ್ವಿ ರೆಡ್ಡಿ ಪ್ರತಿಕ್ರಿಯಿಸಿದರು. ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪೃಥ್ವಿ ರೆಡ್ಡಿ, “ಬಿಜೆಪಿ ನಾಯಕರು ಟ್ವೀಟ್ ಮಾಡುವ ಬದಲು ಹಾಗೂ ಕೇವಲ ಹೇಳಿಕೆ ನೀಡುವ ಬದಲು ಸೂಕ್ತ ತನಿಖೆ ನಡೆಸಲಿ.
ಕಳೆದ ಒಂದೂವರೆ ವರ್ಷಗಳಿಂದ ಈ ವಿಷಯವನ್ನು ಬಹಿರಂಗ ಪಡಿಸದೆ ಚುನಾವಣಾ ಸಂದರ್ಭದಲ್ಲಿ ಈಗ ಆರೋಪ ಮಾಡುವುದರಲ್ಲಿ ನಿರತವಾಗಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಡೀಲ್ ಆಗಿದ್ದಲ್ಲಿ ಡೀಲ್ ಮಾಡಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಆರೋಪಿಗಳಾಗುತ್ತಾರೆ . ಕೋಡಿಹಳ್ಳಿಯವರು ನಿಜವಾಗಿಯೂ ತಪ್ಪು ಮಾಡಿದ್ದರೆ, ಎಲ್ಲಾ ತನಿಖಾ ಸಂಸ್ಥೆಗಳನ್ನು ಹೊಂದಿರುವ ಸರ್ಕಾರ ಸೂಕ್ತ ತನಿಖೆಗೊಳಪಡಿಸಿ ಇನ್ನೂ ಶಿಕ್ಷೆಗೆ ಒಳಪಡಿಸದಿರಲು ಕಾರಣವೇನು?” ಎಂದು ಪ್ರಶ್ನಿಸಿದರು.
ಕೋಡಿಹಳ್ಳಿ ಬಗ್ಗೆ ಸಮರ್ಥನೆ
“ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ರೈತರು ಆಮ್ ಆದ್ಮಿ ಪಾರ್ಟಿಯತ್ತ ಮುಖ ಮಾಡುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರೂ ಪಕ್ಷಗಳ ಜನ – ರೈತ ವಿರೋಧಿ ನಿಲುವಿನಿಂದಾಗಿ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ . ಮುಂಬರುವ ಕರ್ನಾಟಕ ವಿಧಾನಸಭೆಯಲ್ಲಿನ ಎಎಪಿ ಗೆಲುವಿನಲ್ಲಿ ಇಲ್ಲಿನ ರೈತರು ಎಎಪಿ ಪರ ಒಲವು ತೋರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇದರಿಂದ ಹತಾಶರಾಗಿರುವ ಬಿಜೆಪಿ ನಾಯಕರು ಎಎಪಿ ಮುಖಂಡರ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ” ಎಂದು ಪೃಥ್ವಿರೆಡ್ಡಿ ಹೇಳಿದರು.