ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದವರಿಗೆ ಇಲ್ಲದ ಶಿಕ್ಷೆ, ಶಾವಿಗೆ ಒಣಹಾಕಿದ ಬಡಪಾಯಿಗೇಕೆ? ಶುರುವಾಯ್ತು ಅಭಿಯಾನ

ಬೆಳಗಾವಿ: ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣ ಹಾಕಿದ ಮಹಿಳೆಯನ್ನ ಕೆಲಸದಿಂದ ಅಮಾನತು ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ.
‘ವಿಧಾನಸೌಧದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡಿದವರನ್ನೂ ಮಂತ್ರಿ ಮಾಡ್ತಾರೆ.
ಆದ್ರೆ ಬಡ ಮಹಿಳೆಯೊಬ್ಬರು ಸುವರ್ಣ ವಿಧಾನಸೌಧದ ಮೆಟ್ಟಿಲ ಮೇಲೆ ಶಾವಿಗೆ ಒಣ ಹಾಕಿದ್ದಕ್ಕೆ ಆಕೆಯನ್ನ ಕೆಲಸದಿಂದಲೇ ತೆಗೆದು ಹಾಕ್ತಾರೆ. ಇದೆಂಥಾ ನ್ಯಾಯ? ಆ ಮಹಿಳೆಗೆ ತಿಳಿ ಹೇಳಿದ್ದರೆ ಮತ್ತೆ ಹಾಗೆ ಮಾಡುತ್ತಿರಲಿಲ್ಲ’.
‘ಮಲ್ಲಮ್ಮನ ಶಾವಿಗೆ ಒಣ ಹಾಕಲು ನೆರವಾಗದ ಸುವರ್ಣಸೌಧ ನಾಡಿನ ಜನರ ಸಮಸ್ಯೆಗೆ ನೆರವಾಗುತ್ತದೆ ಎಂಬದರಲ್ಲಿ ನನಗೆ ನಂಬಿಕೆ ಇಲ್ಲ’…
‘ವಿಧಾನಸೌಧದಲ್ಲಿ ಕುಳಿತು ಪೋರ್ನ್ ವಿಡಿಯೋ ನೋಡಿದವರಿಗೆ ಶಿಕ್ಷೆ ಕೊಡುವ ಬದಲು ಸರ್ಕಾರ ಅವರನ್ನ ಸಮರ್ಥಿಸಿಕೊಳ್ಳುತ್ತೆ. ಬಡವರು-ದುರ್ಬಲರನ್ನು ನೋಡಿದರೆ ಕಾನೂನುಗಳಿಗೂ ಎಲ್ಲಿಲ್ಲದ ಹುಮ್ಮಸ್ಸು ಬಂದುಬಿಡುತ್ತೆ. ಮಲ್ಲಮ್ಮನಿಗೆ ಆಕೆಯ ಕೆಲಸ ಸಿಗುವಂತಾಗಲಿ’. ಹೀಗೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಮಲ್ಲಮ್ಮನ ಪರ ‘ಐ ಸ್ಟ್ಯಾಂಡ್ ಯೂಥ್ ಮಲ್ಲವ್ವ’ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ‘ಮಲ್ಲವ್ವಗೆ ಕೆಲಸ ವಾಪಸ್ ಕೊಡಿ’ ಎಂದು ಆಗ್ರಹಿಸುತ್ತಿದ್ದಾರೆ.
‘ಉಪಯೋಗವಾಗದೆ ಭೂತಬಂಗಲೆಯಂತಾದ ಸುವರ್ಣಸೌಧ ಹೀಗಾದ್ರೂ ಉಪಯೋಗವಾಗಿದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಬಡಪಾಯಿ ಮಲ್ಲಮ್ಮನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಸುವರ್ಣ ವಿಧಾನಸೌಧ ಸದ್ಬಳಕೆಯಿಲ್ಲದೆ ಬಿಕೋ ಎನ್ನುತ್ತಿರುವ ಕುರಿತು ಬಹಳಷ್ಟು ಟೀಕೆಗಳು ಕೇಳಿ ಬರುತ್ತಿದ್ದವು. ಸುವರ್ಣ ವಿಧಾನಸೌಧದ ಉದ್ದೇಶ ಈಡೇರುತ್ತಿಲ್ಲ ಎನ್ನುವ ಅಸಮಾಧಾನ ಇಲ್ಲಿನ ನಾಗರಿಕರಲ್ಲಿತ್ತು. ಇಂತಹದ್ದರಲ್ಲಿ ಸುವರ್ಣಸೌಧ ಎದುರು ಹಪ್ಪಳ, ಸಂಡಿಗೆ ಒಣಹಾಕಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಅಷ್ಟೊಂದು ಭದ್ರತೆ ಇರುವ ಶಕ್ತಿ ಕೇಂದ್ರಕ್ಕೆ ಶಾವಿಗೆ ಬಂದದ್ದು ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿತ್ತು. ಸುವರ್ಣ ವಿಧಾನಸೌಧದ ಸ್ವಚ್ಛತೆ ಕೆಲಸಕ್ಕೆ ಬರುವ ಮಹಿಳೆಯೊಬ್ಬರು ಸಾಂಭ್ರಾದಿಂದ ಶಾವಿಗೆಯನ್ನು ತಂದು ಮಲ್ಲಮ್ಮಗೆ ಕೊಟ್ಟಿದ್ದಳು. ಮಲ್ಲಮ್ಮ ಶಾವಿಗೆಯನ್ನು ಇನ್ನಷ್ಟು ಒಣಗಿಸಬೇಕು ಎಂದು ಸೀರೆ ಹಾಸಿ ಒಣಹಾಕಿ, ಸ್ವಚ್ಛತಾ ಕೆಲಸ ಮಾಡುತ್ತಿದ್ದಳು. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುವರ್ಣ ವಿಧಾನಸೌಧದ ಘನತೆ ಅರಿಯದೆ ಕೆಲಸದ ಮಹಿಳೆ ಮಾಡಿದ ಎಡವಟ್ಟು ದೊಡ್ಡ ಸುದ್ದಿಯಾಯಿಗಿತ್ತು.
ಸುವರ್ಣಸೌಧ ಎದುರು ಶ್ಯಾವಿಗೆ ಒಣಹಾಕಿದ್ದ ಮಹಿಳೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗಾರರ ಮೂಲಕ ಕೆಲಸದಿಂದ ವಜಾ ಮಾಡಿ ಆದೇಶಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು, ಮರುಕಳಿಸಿದರೆ ಗುತ್ತಿಗೆದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.