ತಿರುಪತಿ ಅರಣ್ಯದಿಂದ ಮಂಗಳೂರಿಗೆ 4 ಕೋಟಿ ರೂ. ಮೌಲ್ಯದ ರಕ್ತಚಂದನ ಸಾಗಾಟ

ಮಂಗಳೂರು, ಜೂನ್ 3 : ದಕ್ಷಿಣ ಕನ್ನಡ ಮತ್ತು ಉಡುಪಿ ವಿಭಾಗದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಆಂಧ್ರಪ್ರದೇಶದಿಂದ ಮಂಗಳೂರು ಬಂದರಿಗೆ ಸಾಗಿಸುತ್ತಿದ್ದ ಸುಮಾರು 4.14 ಕೋಟಿ ರೂಪಾಯಿ ಮೌಲ್ಯದ ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 7 ಆರೋಪಿಗಳನ್ನು ಬಂಧಿಸಿದ್ದಾರೆ.
ಸಿನಿಮೀಯ ಮಾದರಿಯಲ್ಲಿ ರಕ್ತಚಂದನದ ಸಾಗಾಟವಾಗುತ್ತಿದ್ದ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು, ಮಂಗಳೂರು ನಗರದ ಹೊರವಲಯದ ಮೂಡಬಿದ್ರೆ ಸಮೀಪ ಐಚರ್ ವಾಹನವನ್ನು ತಡೆದು ರಕ್ತಚಂದನದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ನೆಲ್ಲೂರಿನ ಅಲ್ಲಾಡಿ ರಾಜೇಶ್ ರೆಡ್ಡಿ, ಕೇರಳದ ಅನಕ್ಕಲ್ ಸುಭಾಷ್ ಎಂ., ತಮಿಳುನಾಡಿನ ತಿರುವನ್ನೂರು ಪಾಲರಾಜ್ ಎಚ್., ಕೇರಳದ ಪಾಲಕ್ಕಾಡಿನ ಶಾಮೀರ್ ಮತ್ತು ಕುಂಞ ಮಹಮ್ಮದ್, ತಮಿಳುನಾಡಿನ ಕೊಯಮತ್ತೂರಿನ ಅನಿಲ್ ಕುಮಾರ್ ತಮಿಳುನಾಡು ದಿನೇಶ್ ಕುಮಾರ್ ಬಂಧಿತ ಆರೋಪಿಗಳು. ಬಂಧಿತರ ಪೈಕಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ.
ಪ್ರಕರಣದ ಪ್ರಮುಖ ಆರೋಪಿ ತಮಿಳುನಾಡಿನ ಕೊಯಮತ್ತೂರಿನ ಅನಿಲ್ ಕುಮಾರ್ ಹಿಂದೆ ಹಲವು ಬಾರಿ ಆಂಧ್ರ ಪ್ರದೇಶ ಮತ್ತು ಕೇರಳ ಬಂದರುಗಳ ಮೂಲಕ ವಿದೇಶಕ್ಕೆ ರಕ್ತಚಂದನವನ್ನು ಕಳುಹಿಸಿದ್ದನು. ಆದರೆ ಆ ಬಂದರುಗಳಲ್ಲಿ ಕಟ್ಟೆಚ್ಚರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರಿನ ಬಂದರು ಮೂಲಕ ವಿದೇಶಕ್ಕೆ ರಕ್ತಚಂದನದ ಸಾಗಾಟಕ್ಕೆ ಸಂಚು ರೂಪಿಸಿದ್ದನು.
ಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಮೂಡಬಿದ್ರೆ ದಾರಿಯಾಗಿ ಮಂಗಳೂರು ಬಂದರಿಗೆ ರಕ್ತಚಂದನದ ವಾಹನ ಸಾಗುತ್ತಿರುವ ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳು ಮೂಡಬಿದ್ರೆ ಸಮೀಪದ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಬಳಿ ವಾಹನ ತಪಾಸಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಹಿಡಿದಿದ್ದಾರೆ. ವಾಹನದಲ್ಲಿ ಬೈಹುಲ್ಲು ಚೀಲಗಳನ್ನು ತುಂಬಿ ಅದರ ನಡುವೆ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ತಿರುಪತಿ ವ್ಯಾಪ್ತಿಯ ಸರಕಾರಿ ಅರಣ್ಯ ಪ್ರದೇಶದಿಂದ ಮರಗಳನ್ನು ಕಡಿದು ದಿಮ್ಮಿಗಳಾಗಿ ಪರಿವರ್ತಿಸಿ ವ್ಯವಸ್ಥಿತವಾಗಿ ಸಂಗ್ರಹಿಸಲಾಗಿತ್ತು. ಮಂಗಳೂರು ಬಂದರಿನ ಮೂಲಕ ರಕ್ತಚಂದನದ ದಿಮ್ಮಿಗಳನ್ನು ಬೃಹತ್ ಮೂಲಕ ಸಿಂಗಾಪುರಕ್ಕೆ ಸಾಗಿಸುವ ಸಂಚು ಮಾಡಲಾಗಿತ್ತು. ಹಿಂದೆಯೂ ಮಂಗಳೂರು ಬಂದರಿನ ಮೂಲಕ ಇಂತಹ ಅಕ್ರಮ ಸಾಗಾಟ ಆಗಿರುವ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.
ಈ ಬಗ್ಗೆ ಕಾರ್ಯಪ್ರವೃತ್ತರಾಗಿರುವ ಮಂಗಳೂರು-ಉಡುಪಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಹಿಂದೆ ಮತ್ತಷ್ಟು ಆರೋಪಿಗಳು ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.