Alok Kumar: ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ರೆಕಾರ್ಡ್ ಬಿಲ್ಡ್ ಆಗ್ತಿದೆ: ಅಲೋಕ್ ಕುಮಾರ್

ಕೆಲವರು ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ನೀವು ಅವರನ್ನು ತೋರಿಸೋದನ್ನು ನಿಲ್ಲಿಸಿದ್ರೆ, ಮರು ದಿನದಿಂದಲೇ ಆ ರೀತಿ ಮಾತನಾಡೋದನ್ನು ನಿಲ್ಲಿಸುತ್ತಾರೆ. ಎಷ್ಟು ಕವರೇಜ್ ಮಾಡಬೇಕೋ, ಅಷ್ಟೇ ಕವರೇಜ್ ಮಾಡಿ ಜನತೆಗೆ ತೋರಿಸಿ ಎಂದು ಮಾಧ್ಯಮಗಳಿಗೆ ಅಲೋಕ್ ಕುಮಾರ್ ಹೇಳಿದರು.
ಎಲ್ಲರ ದಾಖಲೆ ಸಿದ್ಧವಾಗ್ತಿದೆ
ಕಾನೂನು ಉಲ್ಲಂಘನೆ ಮಾಡೋರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಯಾರು, ಏನು ಹೇಳಿಕೆ ನೀಡುತ್ತಿದ್ದಾರೆ ಎಂಬುದರ ದಾಖಲೆ ಸಿದ್ಧವಾಗುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರ ಮೇಲೆ ನಿಗಾ ಇರಿಸಿರೋದನ್ನು ಅಲೋಕ್ ಕುಮಾರ್ ಹೇಳಿದರು.
ಒಂದೊಂದು ವರ್ಗಕ್ಕೆ ಒಂದೊಂದು ಕಾನೂನು ಅಂತ ಏನಿಲ್ಲ. ಎಲ್ಲಾ ಸಮುದಾಯಕ್ಕೆ ಒಂದೇ ಕಾನೂನು. ಅದನ್ನು ಎಲ್ಲರೂ ಪಾಲಿಸಬೇಕು ಮತ್ತು ಗೌರವಿಸಬೇಕು. ಯಾವ ರೀತಿ ಮಾಡ್ತಾರೆ, ಅದೇ ರೀತಿ ರೆಕಾರ್ಡ್ ಬಿಲ್ಡ್ ಆಗುತ್ತಿದೆ ಎಂದು ಎಚ್ಚರಿಕೆ ಸಂದೇಶವನ್ನು ಮಾಧ್ಯಮಗಳ ಮೂಲಕ ರವಾನಿಸಿದರು.
ಮುತಾಲಿಕ್ ಬೀದರ್ ಗೆ ತೆರಳದಂತೆ ನಿರ್ಬಂಧ
ಅನುಭವ ಮಂಟಪ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಬೀದರ್ ಗೆ ಹೊರಟಿದ್ರು. ಕೆಲವು ಕಡೆ ಪ್ರಮೋದ್ ಮುತಾಲಿಕ್ ಹೋಗಬಾರದು ಎಂದು ಸೆಕ್ಷನ್ 144 ಹಾಕಲಾಗಿದೆ. ಮುತಾಲಿಕ್ ಅನುಭವ ಮಂಟಪ ವಿಚಾರಕ್ಕೆ ಎಂಟ್ರಿ ಆಗಬಾರದು ಎಂದು ನಿರ್ಬಂಧ ಹಾಕಲಾಗಿದೆ ಎಂದು ತಿಳಿಸಿದರು.
ಕೆಲ ಸಂಘಟನೆಗಳ ವಿರುದ್ಧ ದಾಖಲೆ ಸಂಗ್ರಹ
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಏನ್ ಮಾಡಬೇಕೋ ಅದನ್ನ ಮಾಡ್ತಿದೆ. ಮುಂದೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದದ ಬಗ್ಗೆ ಸಂಘಟನೆಗಳ ಮೇಲೆ ಕಣ್ಣಿಟ್ಟಿದ್ದೀವಿ. ಅಂತಹ ಸಂಘಟನೆಗಳ ವಿರುದ್ಧ ದಾಖಲೆ ಸಂಗ್ರಹ ಮಾಡಲಾಗುತ್ತಿದೆ. ಸಮಯ ಬಂದಾಗ ಏನ್ ಮಾಡಬೇಕೋ ಅದನ್ನು ಮಾಡುತ್ತೇವೆ.
ಇದೇ ವೇಳೆ ಅಲೋಕ್ ಕುಮಾರ್ ಅವರು ಪಿಎಸ್ಐ ಅಕ್ರಮ ನೇಮಕಾತಿಯ ಕುರಿತು ಮಾತನಾಡಿದರು. ಈ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪಿಎಸ್ಐ ಅಕ್ರಮದ ತನಿಖೆ ನನ್ನ ವ್ಯಾಪ್ತಿಗೆ ಬರಲ್ಲ. ಮುಂದೆ ಈ ರೀತಿಯ ಅಕ್ರಮಗಳು ನಡೆಯದಂತೆ ನೋಡಿಕೊಳ್ಳಬೇಕು.
ಚಲವಲನದ ಮೇಲೆ ವಿಶೇಷ ನಿಗಾ
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿಯೂ ಒಂದು ಗ್ಯಾಂಗ್ ಇರೋ ಮಾಹಿತಿ ಇದೆ. ಎಸ್ ಪಿ ಅವರಿಗೆ ಹೇಳಿ ಮಾಹಿತಿ ಕಲೆ ಹಾಕಬೇಕಿದೆ. ಬಾಗಲಕೋಟೆ, ವಿಜಯಪುರ ಭಾಗದಲ್ಲಿಯೂ ಕೆಲ ಜನರಿದ್ದು, ಇವರ ಚಲನವಲನದ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದು ಹೇಳಿದರು. ಆರೋಪಿಗಳ ವಿರುದ್ಧ ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.