ಕನ್ನಡಿಗರ ಮೇಲೆ ಮತ್ತೆ ದೌರ್ಜನ್ಯ: ಬಸ್ ಚಾಲಕ, ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ: ಕನ್ನಡಿಗರ ಮೇಲೆ ಮತ್ತೆ ದೌರ್ಜನ್ಯ

ವಿಜಯಪುರ: ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ತೆಲುಗರಿಂದ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರೆದಿದ್ದು, ಕಾರಣವೇ ಇಲ್ಲದೇ ಆಂಧ್ರಪ್ರದೇಶದ ಶ್ರೀಶೈಲ ಶ್ರೀಕ್ಷೇತ್ರದಲ್ಲಿ ಬಸ್ ಚಾಲಕ, ನಿರ್ವಾಹಕರ ಮೇಲೆ ದಾಳಿ ನಡೆಸಿದ್ದು, ಬಸ್ ಕಿಟಕಿ ಗಾಜು ಒಡೆದು ದೌರ್ಜನ್ಯ ಎಸಗಿದ ಘಟನೆ ವರದಿಯಾಗಿದೆ.
ಘಟನೆಯಲ್ಲಿ ವಿಜಯಪುರ ಬಸ್ ಚಾಲಕ ಬಸವರಾಜ ಬಿರಾದಾರ ಮುಖ, ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ಘಟಕಕ್ಕೆ ಸೇರಿದ ಬಸ್ ಶ್ರೀಶೈಲ ಕ್ಷೇತ್ರಕ್ಕೆ ತೆರಳಿತ್ತು. ಜೂನ್ 2 ರಂದು ಮಧ್ಯ ರಾತ್ರಿ ಶ್ರೀಶೈಲದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಚಾಲಕ- ನಿರ್ವಾಹಕ ಮಲಗಿದ್ದರು.
ಮಧ್ಯ ರಾತ್ರಿ ಏಕಾಏಕಿ ಆಗಮಿಸಿದ ಸುಮಾರು 12 ಜನರಿದ್ದ ತಂಡ ಚಾಲಕ, ಕಂಡಕ್ಟರ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಸ್ ನ ಕಿಟಕಿ ಗಾಜು ಒಡೆದು, ಕನ್ನಡಿಗರ ಬಗ್ಗೆ ಅಶ್ಲೀಲವಾಗಿ ನಿಂದಿಸಿ, ಪುಂಡರ ಗುಂಪು ಬೆದರಿಕೆ ಹಾಕಿದೆ.
ದಾಳಿಯ ವೇಳೆ ಚಾಲಕ ಬಸವರಾಜ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಇತರೆ ವಾಹನಗಳ ಚಾಲಕ, ಕಂಡಕ್ಟರ್ಗಳು ಬಸವರಾಜ ಅವರ ರಕ್ಷಣೆಗಾಗಿ ಓಡಿ ಬಂದಿದ್ದಾರೆ. ಇದನ್ನು ಕಂಡ ಪುಂಡರು ಅಲ್ಲಿಂದ ಓಡಿ ಹೋಗಿದ್ದಾರೆ.
ಈ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ಚಾಲಕರ ಬಸವರಾಜ ದೂರು ನೀಡಿದ್ದಾರೆ.
ಕಳೆದ ಯುಗಾದಿ ಸಂದರ್ಭದಲ್ಲಿ ನೀರಿನ ಬಾಟಲಿಗೆ ಹೆಚ್ಚಿನ ಬೆಲೆ ಪಡೆಯುವುದನ್ನು ಪ್ರಶ್ನಿಸಿದ ಕನ್ನಡಿಗರ ಮೇಲೆ ಮಾರ್ಚ್ 31 ರಂದು ಶ್ರೀಶೈಲದಲ್ಲಿ ತೆಲುಗು ವ್ಯಾಪಾರಿಗಳು ಹಲ್ಲೆ ನಡೆಸಿದ್ದರು.
ಅಲ್ಲದೇ ಕರ್ನಾಟಕದ ವಾಹನಗಳ ಮೇಲೆ ದಾಳಿ ನಡೆಸಿ ಗಾಜು ಒಡೆದು ಹಾಕಿದ್ದರು. ಸಾಲದ್ದಕ್ಕೆ ಬಾಗಲಕೋಟೆ ಜಿಲ್ಲೆಯ ಬಿಳಗಿ ಮೂಲದ ಶ್ರೀಶೈಲ ವಾರಿಮಠ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಬಗ್ಗೆ ಕರ್ನಾಟಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಈ ಘಟನೆ ಮಾಸುವ ಮುನ್ನವೇ ಇದೀಗ ಕರ್ನಾಟಕದ ಸಾರಿಗೆ ಸಂಸ್ಥೆ ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು, ಶ್ರೀಶೈಲದಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ.