ನಿಜವಾಯ್ತು ಸಂದೇಹ: ನಟ ಸಲ್ಮಾನ್ ಖಾನ್ ಟೇಬಲ್ ಮೇಲೆ ಬೆದರಿಕೆ ಪತ್ರ!

ಹೈದರಾಬಾದ್: ಪಂಜಾಬಿ ಖ್ಯಾತ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ (29)ಅವರ ಹತ್ಯೆ ಪ್ರಕರಣದ ಬೆನ್ನಲ್ಲೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು.
ಇದಕ್ಕೆ ಕಾರಣ, ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಪ್ರಮುಖ ಆರೋಪಿಯಾಗಿರುವುದು.
ಈತನಿಗೂ ಸಲ್ಮಾನ್ ಖಾನ್ಗೂ ಏನು ಸಂಬಂಧ ಎಂದರೆ ಈ ಹಿಂದೆ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಬಿಷ್ಣೋಯ್ ಸಂಚು ರೂಪಿಸಿದ್ದ ಎನ್ನಲಾಗಿದೆ. 2018ರಲ್ಲಿ ರಾಜಸ್ಥಾನದಲ್ಲಿ ಕೃಷ್ಣಮೃಗ ಬೇಟೆ ಆಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿದ್ದರು. ಈ ಸಮಯದಲ್ಲಿ ಕೋರ್ಟ್ ಹೊರಗೆ ಮಾತನಾಡಿದ್ದ ಬಿಷ್ಣೋಯ್, ಸಲ್ಮಾನ್ ಖಾನ್ನನ್ನು ಕೊಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದ. ಬಿಷ್ಣೋಯ್ ಅವರ ನಿಕಟ ಸಂಪರ್ಕದಲ್ಲಿದ್ದ ರಾಹುಲ್ ಅಲಿಯಾಸ್ ಸುನ್ನಿಯನ್ನ 2020ರಲ್ಲಿ ಬಂಧನ ಮಾಡಲಾಗಿತ್ತು. ಈ ವೇಳೆ, ವಿಚಾರಣೆ ನಡೆಸಿದಾಗ ಸಲ್ಮಾನ್ ಖಾನ್ ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಸಲ ಸಲ್ಮಾನ್ ಖಾನ್ಗೆ ಬೆದರಿಕೆ ಸಹ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.
ಈ ಸಂದೇಹ ಕೊನೆಗೂ ನಿಜವಾಗಿ ಬಿಟ್ಟಿದೆ. ಸಲ್ಮಾನ್ ಖಾನ್ಗೆ ಬೆದರಿಕೆ ಪತ್ರ ಬಂದಿದೆ. ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಪತ್ರವೊಂದು ಬಂದಿದೆ. ನಟ ಸಲ್ಮಾನ್ ಖಾನ್ ಅವರ ತಂದೆ ಭಾನುವಾರ ಬೆಳಗ್ಗೆ ಜಾಗಿಂಗ್ ಮುಗಿಸಿ ಬಂದಾಗ ಮನೆಯ ಟೇಬಲ್ ಮೇಲಿದ್ದ ಪತ್ರವನ್ನು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ನಟ ಸಲ್ಮಾನ್ ಖಾನ್ರನ್ನು ಕೊಲೆ ಮಾಡಲಾಗುವುದು ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಈ ಬಗ್ಗೆ ಕುಟುಂಬಸ್ಥರು ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೂಸೆವಾಲಾ ಅವರ ಹೆಸರು ಶುಭದೀಪ್ ಸಿಂಗ್. ಅವರು ಭಾರತೀಯ ಗಾಯಕ, ರ್ಯಾಪರ್, ಗೀತರಚನೆಕಾರ ಮತ್ತು ಪಂಜಾಬಿ ಸಂಗೀತ ಮತ್ತು ಪಂಜಾಬಿ ಸಿನಿಮಾದೊಂದಿಗೆ ಸಂಬಂಧ ಹೊಂದಿರುವ ನಟ ಕೂಡ ಇವರು. ವಿವಾದಾತ್ಮಕ ಹಾಡುಗಳ ಶೈಲಿಯಿಂದಾಗಿ ಸದಾ ಚರ್ಚೆಯಲ್ಲಿ ಇರುತ್ತಿದ್ದ ಮೂಸೆವಾಲಾ ಅವರನ್ನು ಹತ್ಯೆ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ನಟ ಸಲ್ಮಾನ್ಗೆ ಜೀವ ಭಯ ಉಂಟಾಗಿದೆ.