ಬೆಳಗಾವಿಯಲ್ಲೊಂದು ಮಾದರಿ ಆಫೀಸ್ ಇದು ಸರ್ಕಾರಿ ಕಚೇರಿ ಅಂದ್ರೆ ನಂಬಿಕೆಯೇ ಬರಲ್ಲ!

ಜಿಲ್ಲಾ ಪಂಚಾಯತಿಗೆ ಜಿಲ್ಲೆಯ ನಾನಾ ಕಡೆಗಳಿಂದ ವಿವಿಧ ಕಾರ್ಯಗಳ ನಿಮಿತ್ತವಾಗಿ ಪ್ರತಿದಿನ ನೂರಾರು ಜನ ಬರುತ್ತಾರೆ. ಇಂತವರಲ್ಲಿ ಬಹಳಷ್ಟು ಜನ ತಮ್ಮ ಕೆಲಸಗಳ ಬಗ್ಗೆಯೇ ಹೆಚ್ಚಿನ ಗಮನ ಹರಿಸುತ್ತ ಒತ್ತಡದಲ್ಲಿರುತ್ತಾರೆ. ಆದರೆ ಜಿಲ್ಲಾ ಪಂಚಾಯತ್ಗೆ ಬರುತ್ತಿದ್ದಂತೆ ಮೊದಲ ಮಹಡಿಯಲ್ಲಿರುವ ಗ್ರಂಥಾಲಯ ಜನರನ್ನು ಆಕರ್ಷಿಸುತ್ತಿದೆ.
ಪುಸ್ತಕ ಓದಲು ಇದುವೇ ಪ್ರೇರಣೆ!
ಪುಸ್ತಕಗಳನ್ನು ಓದುವ ಮೂಲಕ ಜನರು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವುದಲ್ಲದೇ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಕೇವಲ ತಮ್ಮ ಕೆಲಸ ಕಾರ್ಯಗಳಿಗೆ ಸೀಮಿತವಾಗದೇ, ಪುಸ್ತಕಗಳೆಡೆಗೂ ಆಕರ್ಷಿತರಾಗಲು ಪ್ರೇರೇಪಣೆ ನೀಡುತ್ತಿದೆ.
ಗ್ರಂಥಾಲಯ ಆರಂಭಕ್ಕೆ ಏನು ಕಾರಣ? ಯಾರು ಪ್ರೇರಣೆ?
ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಎಚ್.ವಿ ಅವರ ವಿಶೇಷ ಆಸಕ್ತಿಯ ಮೇರೆಗೆ ಜಿಲ್ಲಾ ಪಂಚಾಯತ ನಿರ್ಮಾಣ ಮತ್ತು ನಿರ್ವಹಣೆ ಲೆಕ್ಕ ಶೀರ್ಷಿಕೆಯ ಯೋಜನೆಯಡಿ 5 ಲಕ್ಷ ರೂ. ವೆಚ್ಚದಡಿ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ಈ ಗ್ರಂಥಾಲಯವು ನಾನಾ ಕೆಲಸದ ನಿಮಿತ್ತವಾಗಿ ಕಚೇರಿಗೆ ಆಗಮಿಸುವ ಪಂಚಾಯತ ರಾಜ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುತ್ತಿದೆ. ಪಂಚಾಯತ ರಾಜ್ ಇಲಾಖೆಗೆ ಸಂಬಂಧಿಸಿದ ಮಾಹಿತಿ ಪುಸ್ತಕಗಳು, ಸ್ಪರ್ಧಾತ್ಮಕ ಪುಸ್ತಕಗಳಿರುವುದರಿಂದ ಓದುಗರನ್ನು ಆಕರ್ಷಿಸುತ್ತಿದೆ.
ಸ್ಪರ್ಧಾತ್ಪಕ ಪರೀಕ್ಷಾ ತಯಾರಿಗೆ ಅನುಕೂಲ
ಈ ಗ್ರಂಥಾಲಯದಲ್ಲಿ ಶಾಂತ ವಾತಾವರಣ ಮತ್ತು ಓದಲು ಅನುಕೂಲತೆ ಇರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವವರಿಗೆ ಈ ಗ್ರಂಥಾಲಯ ವರದಾನವಾಗಿದೆ.
ಎಷ್ಟು ಪುಸ್ತಕಗಳಿವೆ?
ನಿಮಗೆ ಗೊತ್ತೇ? ಈ ಗ್ರಂಥಾಲಯದಲ್ಲಿ ಒಟ್ಟು 3,000 ಪುಸ್ತಕಗಳಿದ್ದು, ಅವುಗಳ ಪೈಕಿ 500 ಪುಸ್ತಕಗಳು ಇಂಗ್ಲೀಷ್ ಕಾದಂಬರಿಗಳಾಗಿವೆ. 1,500 ಕನ್ನಡದ ಕವನ ಸಂಕಲನ, ಕಥೆ ಪುಸ್ತಕಗಳು, ಕಾದಂಬರಿಗಳು ಸೇರಿವೆ. ಅಲ್ಲದೇ 1,000 ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು ಹಾಗೂ ಇಲಾಖೆಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಪ್ರತಿ ತಿಂಗಳು 10 ನಿಯಕಾಲಿಕೆಗಳು ಹಾಗೂ ಪ್ರತಿದಿನ ಕನ್ನಡ, ಮರಾಠಿ, ಇಂಗ್ಲೀಷ್ ಸೇರಿದಂತೆ 4 ದಿನಪತ್ರಿಕೆಗಳು ಓದುಗರಿಗೆ ಲಭ್ಯವಿವೆ.
ಗ್ರಂಥಾಲಯದಲ್ಲಿ ಕುಳಿತುಕೊಂಡು ಓದಲು ಉತ್ತಮ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ದಿನಪತ್ರಿಕೆಗೆ ಓದುಗರಿಗೆ ಪ್ರತ್ಯೇಕ ಸ್ಟಾಂಡ್ ನಿರ್ಮಿಸಲಾಗಿದೆ. ಜಿಲ್ಲಾ ಪಂಚಾಯತ್ಗೆ ಆಗಮಿಸಿದವರಿಗೆ ಪುಸ್ತಕದ ಆಸಕ್ತಿ ಬೆಳೆಸುವ ಉದ್ದೇಶದಿಂದ ವ್ಯವಸ್ಥಿತವಾದ ಗ್ರಂಥಾಲಯ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಸಿಇಒ ದರ್ಶನ ಎಚ್.ವಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ್ಗೆ ಹೀಗೆ ತೆರಳಿ (ಚಿತೃಕೃಪೆ: ಗೂಗಲ್ ಮ್ಯಾಪ್ಸ್)
ಬೆಳಗಾವಿ ಜಿಲ್ಲಾ ಪಂಚಾಯತ್ ಸಂಪರ್ಕ ಸಂಖ್ಯೆ: 0831 240 7201
ಕೆಲಸದ ಮೇಲೆ ಜಿಲ್ಲಾ ಪಂಚಾಯತ್ ಕಚೇರಿಗೆ ಆಗಮಿಸಿದ್ದೆ. ಇಲ್ಲಿಯ ಗ್ರಂಥಾಲಯಗಳನ್ನು ನೋಡಿ ಪುಸ್ತಕಗಳನ್ನು ಓದಬೇಕೆಂಬ ಆಸೆಯಾಯಿತು. ಕಾಲೇಜು ದಿನಗಳು ಮತ್ತೆ ನೆನಪಿಗೆ ಬಂದವು. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪನೆಯು ಒಳ್ಳೆಯ ಆಲೋಚನೆಯಾಗಿದೆ. ಇದರಿಂದ ಕಚೇರಿಗೆ ಕೆಲಸದ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ಪುಸ್ತಕಗಳನ್ನು ಓದುವ ಅವಕಾಶವು ದೊರೆಯುತ್ತದೆ ಎಂದು ಕೆಲಸದ ನಿಮಿತ್ತ ಬೆಳಗಾವಿ ಜಿಲ್ಲಾ ಪಂಚಾಯತ್ಗೆ ಆಗಮಿಸಿದ್ದ ಮಹೇಶ ಇಚ್ಚಲಕರಂಜಿ ಎಂಬುವರು ಅಭಿಪ್ರಾಯಪಟ್ಟರು.