ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿದ್ದಾರೆ: ಶಾಸಕ ಅನಿಲ್ ಬೆನಕೆ ಆರೋಪ

ಅರುಣ ಶಾಹಪುರ ಅವರು ೧೨ ವರ್ಷ ಮಾಡಿರುವ ಕೆಲಸ, ಶಿಕ್ಷಕರ ಬಗ್ಗೆ ಅವರಿಗಿರುವ ಕಾಳಜಿ, ಶಿಕ್ಷಕರ ಜೊತೆಗೆ ನೇರವಾಗಿ ಹೊಂದಿರುವ ಸಂಪರ್ಕಕ್ಕೆ ಅಂಜಿ ಈ ರೀತಿ ಹಣ ಹಂಚಿದ್ದಾರೆ ಎಂದು ಉತ್ತರ ಶಾಸಕ ಅನಿಲ್ ಬೆನಕೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ಧ ಆರೋಪ ಮಾಡಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ಮತಗಟ್ಟೆ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕ ಅನಿಲ್ ಬೆನಕೆ ಒಟ್ಟಾರೆ ಒಳ್ಳೆಯ ವಾತಾವರಣ ನೋಡಿದ್ರೆ ಒಳ್ಳೆಯ ರೀತಿಯಲ್ಲಿ ಎಲ್ಲರೂ ವೋಟ್ ಮಾಡುತ್ತಿದ್ದಾರೆ. ಆದರೆ ವಾಮಮಾರ್ಗದಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿರೋದು ದುಃಖದ ಸಂಗತಿ.
ಆದರೆ ಶಿಕ್ಷಕರು ಇದಕ್ಕೆ ಮರುಳಾಗಬಾರದು. ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ಮಾಡಿರೋದು ಮಾಧ್ಯಮಗಳಲ್ಲಿಯೇ ಬಂದಿದೆ.
ಈ ಬಗ್ಗೆ ನಾವು ದೂರು ಕೊಟ್ಟಿದ್ದೇವೆ. ವಿಜಯಪುರದಲ್ಲಿ ಕೇಸ್ ದಾಖಲಾಗಿದೆ ಎಂದರು.
ನಾವು ಯಾರಿಗೂ ಒಂದು ರೂಪಾಯಿ ಕೊಟ್ಟಿಲ್ಲ. ವಾಚ್ ಏನೂ ಕೊಡುವ ಪ್ರಶ್ನೆಯೇ ಇಲ್ಲ. ನಮ್ಮ ಎಲ್ಲಾ ಮತದಾರರು ನಮಗೆ ಮತ ಹಾಕಲಿದ್ದಾರೆ. ನಮ್ಮ ಎದುರಾಳಿ ದೊಡ್ಡವ, ಸಣ್ಣವನಿದ್ದಾನೆ ಅಂತಾ ನೋಡೋದಿಲ್ಲ ಎಲ್ಲಾ ಚುನಾವಣೆಯನ್ನು ನಾವು ಗಂಭೀರವಾಗಿಯೇ ಪರಿಗಣಿಸುತ್ತೇವೆ. ಎಲ್ಲಾ ಹಳ್ಳಿಗಳ ಜನರ ವೋಟಿಂಗ್ ಕೂಡ ಇಲ್ಲಿಯೇ ಇರೋದರಿಂದ ಎಲ್ಲಾ ಬೂತ್ಗಳಿಗೆ ಭೇಟಿ ಕೊಡುತ್ತಿದ್ದೇನೆ ಎಂದರು.
ಒಂದು ವೋಟ್ಗೆ ೧೦ ಸಾವಿರ ರೂಪಾಯಿ ಎಂಬ ಚರ್ಚೆ ಆಗಿದೆ. ಶಿಕ್ಷಕರಿಗೂ ಹಣ ಹಂಚುತ್ತಿರುವುದು ಸರಿಯಲ್ಲ. ಇಂತಹ ಬೆಳವಣಿಗೆ ಆಗಬಾರದು. ಇದು ಒಳ್ಳೆಯ ಸಂಗತಿ ಅಲ್ಲ. ಅರುಣ ಶಾಹಪುರ ಅವರಿಗೆ ಅಂಜಿ ಈ ರೀತಿ ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ ಎಂದು ಇದೇ ವೇಳೆ ಶಾಸಕ ಅನಿಲ್ ಬೆನಕೆ ಆರೋಪಿಸಿದರು.