ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಸೇರಿದಂತೆ ಐವರಿಗೆ ಜಾಮೀನು
ಡ್ರಗ್ಸ್ ಕೇಸ್: ಸಿದ್ದಾಂತ್ ಕಪೂರ್ ಸೇರಿದಂತೆ ಐವರಿಗೆ ಜಾಮೀನು

ಬೆಂಗಳೂರು, ಜೂನ್ 14: ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಸಿದ್ದಾಂತ್ ಹಾಗೂ ಐವರಿಗೆ ಸೋಮವಾರ ರಾತ್ರಿ ಠಾಣೆ ಜಾಮೀನು(Station bail) ಸಿಕ್ಕಿದೆ.
ಸಿದ್ದಾಂತ್ ಮಾದಕ ದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದರಿಂದ ಸೋಮವಾರ ಬಂಧನಕ್ಕೊಳಗಾಗಿದ್ದರು. ಬೆಂಗಳೂರಿನ ಟ್ರಿನಿಟಿ ವೃತ್ತದ ಬಳಿ ಇರುವ ದಿ ಪಾರ್ಕ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ದಾಳಿ ನಡೆಸಿದ್ದರು. ಹಲಸೂರು ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 50ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು.
ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಟ ಸಿದ್ದಾಂತ್ ಕಪೂರ್ ಸೇರಿದಂತೆ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದು ತನಿಖಾಧಿಕಾರಿ ಮಂಜುನಾಥ್ ಹೇಳಿದ್ದರು.
ಎಲ್ಲರ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.ಆದರೆ, ಸೋಮವಾರ ರಾತ್ರಿ ವೇಳೆಗೆ ಠಾಣೆ ಜಾಮೀನು ಸಿಕ್ಕಿದ್ದು, ಸಿದ್ಧಾಂತ್ ಕಪೂರ್ ಹೊರ ಬಂದಿದ್ದಾರೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ, ಪೊಲೀಸರ ಕ್ರಮವನ್ನುಸಿದ್ಧಾಂತ್ ಸ್ವಾಗತಿಸಿದ್ದಾರೆ.
”ಸಿದ್ದಾಂತ್ ಸೇರಿದಂತೆ ಐವರಿಗೆ ಠಾಣೆ ಜಾಮೀನು ನೀಡಿ ಕಳಿಸಲಾಗಿದೆ, ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕಾಗುತ್ತದೆ” ಎಂದು ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.