Breaking; ರಾಷ್ಟ್ರಪತಿ ಚುನಾವಣೆ, ಮಮತಾ ಸಭೆಯಲ್ಲಿ ಎಚ್ಡಿಕೆ ಭಾಗಿ
ರಾಷ್ಟ್ರಪತಿ ಚುನಾವಣೆ : HDK ದೆಹಲಿ ಪ್ರಯಾಣ, ಮಮತಾ ಬ್ಯಾನರ್ಜಿ ಕರೆದಿರುವ ಸಭೆಯಲ್ಲಿ ಭಾಗಿ

ಬೆಂಗಳೂರು, ಜೂನ್ 14; ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ತಂತ್ರಗಳ ಕುರಿತು ಚರ್ಚಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿಮಮತಾ ಬ್ಯಾನರ್ಜಿಸಭೆ ಕರೆದಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರ ನವದೆಹಲಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಗುರುವಾರ ಬೆಳಗ್ಗೆ ಎಚ್. ಡಿ. ಕುಮಾರಸ್ವಾಮಿ ನವದೆಹಲಿಗೆ ತೆರಳಲಿದ್ದಾರೆ.
ರಾಷ್ಟ್ರಪತಿ ಚುನಾವಣೆ ಸಂಬಂಧ ಮಮತಾ ಬ್ಯಾನರ್ಜಿ ಕರೆದಿರುವ ಪ್ರತಿಪಕ್ಷಗಳ ಸಭೆ ಭಾರೀ ಮಹತ್ವ ಪಡೆದಿದೆ. ಇಡೀ ದೇಶವೇ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಗ್ಗೆ ಕಾದು ನೋಡುತ್ತಿದೆ. ಈ ಸಭೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಪಾಲ್ಗೊಳ್ಳುತ್ತಿದ್ದಾರೆ.
ಈ ಬಗ್ಗೆ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಕ್ಕೂಟದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲು ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್. ಡಿ. ದೇವೇಗೌಡರಿಗೆ ಹಾಗೂ ನನಗೆ ವೈಯಕ್ತಿಕವಾಗಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಹೀಗಾಗಿ ನಾವಿಬ್ಬರೂ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದು ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಎಲ್ಲಾ ಪ್ರಾದೇಶಿಕ ಪಕ್ಷಗಳ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಯತ್ನಗಳನ್ನು ಆರಂಭಿಸಿದ್ದು, ಸುಮಾರು 22ಕ್ಕೂ ಹೆಚ್ಚು ಪಕ್ಷಗಳ ನಾಯಕರನ್ನು ಸಭೆಗೆ ಆಹ್ವಾನಿಸಿದ್ದಾರೆ. ಆದರೆ, ಜೆಡಿಎಸ್ ಪಕ್ಷದಿಂದ ಇಬ್ಬರು ನಾಯಕರನ್ನು ಅವರು ವೈಯಕ್ತಿವಾಗಿ ಆಹ್ವಾನಿಸಿದ್ದಾರೆ.
ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ನಲ್ಲಿ ಮಧ್ಯಾಹ್ನ 3 ಗಂಟೆಗೆ ಈ ಸಭೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಪಾಲ್ಗೊಳ್ಳಲಿದ್ದಾರೆ.
16ನೇ ರಾಷ್ಟ್ರಪತಿ ಆಯ್ಕೆಗೆ ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಜುಲೈ 18ರಂದು ಚುನಾವಣೆ ನಡೆಯಲಿದೆ. ಜುಲೈ 21ರಂದು ಮತ ಎಣಿಕೆ ನಡೆಯಲಿದೆ.