ಶ್ರೀಕೃಷ್ಣ ಮಂದಿರದ ಸ್ಲ್ಯಾಬ್ ಕಾಮಗಾರಿಗೆ ಪೂಜೆ ನೆರವೇರಿಸಿದ ಚನ್ನರಾಜ ಹಟ್ಟಿಹೊಳಿ

ಬಡಾಲ ಅಂಕಲಗಿ ಗ್ರಾಮದ ಶ್ರೀಕೃಷ್ಣ ಮಂದಿರದ ಸ್ಲ್ಯಾಬ್ ಕಾಂಕ್ರೀಟ್ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಪೂಜೆ ನೆರವೇರಿಸಿದರು.
ಗ್ರಾಮೀಣ ಪ್ರದೇಶಗಳು ಇಂದು ವೃದ್ಧಾಶ್ರಮಗಳಂತಾಗುತ್ತಿವೆ. ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟು ಯುವಜನತೆ ಕೃಷಿಯ ಜೊತೆಗೆ ಸಣ್ಣ ಪುಟ್ಟ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು. ಇದಕ್ಕೆ ಅಗತ್ಯವಾದ ಮಾಹಿತಿ, ತರಬೇತಿ ಸೇರಿದಂತೆ ಎಲ್ಲ ನೆರವು ನೀಡಲಾಗುವುದು ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ತಂದೆ, ತಾಯಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರಲ್ಲಿ ದೇವರನ್ನು ಕಾಣಬೇಕು. ಇಡೀ ಗ್ರಾಮ ಅತ್ಯಂತ ಪ್ರೀತಿ, ವಿಶ್ವಾಸ, ಒಗ್ಗಟ್ಟಿನಿಂದ ಇರಬೇಕು ಎಂದೂ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ರಾಚಯ್ಯ ಅಜ್ಜನವರು, ಗ್ರಾಮದ ಹಿರಿಯರು, ಕೃಷ್ಣ ಮಂದಿರದ ಟ್ರಸ್ಟ್ ಕಮೀಟಿಯವರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.