ನೂಪುರ್ ಶರ್ಮ ನಾಪತ್ತೆ: ದೆಹಲಿಯಲ್ಲಿ ಬೀಡುಬಿಟ್ಟ ಮಹಾರಾಷ್ಟ್ರ ಪೊಲೀಸರು!

ಪ್ರವಾದಿ ಮೊಹಮದ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮ ನಾಪತ್ತೆಯಾಗಿದ್ದು, ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ ಕಳೆದ 5 ದಿನಗಳಿಂದ ಬೀಡು ಬಿಟ್ಟಿದ್ದಾರೆ.
ನೂಪುರ್ ಶರ್ಮ ಬಂಧನಕ್ಕೆ ಆಗ್ರಹಿಸಿ ದೇಶದ ನಾನಾ ಕಡೆ ಪ್ರತಿಭಟನೆ ಗಳು ನಡೆದಿದ್ದು, ಉತ್ತರ ಪ್ರದೇಶದಲ್ಲಿ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು.
ಇದೇ ವೇಳೆ ಬಿಜೆಪಿ ಮುಖಂಡರ ಹೇಳಿಕೆ ಖಂಡಿಸಿ ಅರಬ್ ಸೇರಿದಂತೆ ಮುಸ್ಲಿಂ ದೇಶಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿತ್ತು.
ಇದೆಲ್ಲದರ ನಡುವೆ ನೂಪುರ್ ಶರ್ಮ ನಾಪತ್ತೆಯಾಗಿದ್ದು, ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ ಕಳೆದ ೫ ದಿನಗಳಿಂದ ಬೀಡು ಬಿಟ್ಟಿದ್ದು, ದೆಹಲಿ ಪೊಲೀಸರಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ನೂಪುರ್ ಶರ್ಮ ಅವರನ್ನು ಬಂಧಿಸಲು ಸಾಕಷ್ಟು ಸಾಕ್ಷ್ಯಗಳು ನಮ್ಮ ಬಳಿ ಇವೆ. ಆದರೆ ಆಕೆ ಎಲ್ಲಿ ಅಡಗಿದ್ದಾರೆ ಎಂಬುದು ಪತ್ತೆಯಾಗುತ್ತಿಲ್ಲ. ಶೀಘ್ರದಲ್ಲೇ ಆಕೆಯನ್ನು ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.