ಬೆಳಗಾವಿಯಲ್ಲಿ ದೇವಸ್ಥಾನ ಜಾಗದ ವಿಚಾರವಾಗಿ 2 ಗುಂಪಿನ ಮಧ್ಯೆ ಗಲಾಟೆ: ಓರ್ವ ಹತ್ಯೆ, ಇಡೀ ಊರಿಗೆ ಬೆಂಕಿ

ಬೆಳಗಾವಿ: ದೇವಸ್ಥಾನದ ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಓರ್ವನ ಹತ್ಯೆಯಾಗಿದ್ದು, ಇಡೀ ಗ್ರಾಮಕ್ಕೆ ಬೆಂಕಿ ಇಡಲಾಗಿದೆ. ಪರಿಣಾಮ ಎರಡು ಕಾರು, ಒಂದು ವಾಟರ್ ಟ್ಯಾಂಕ್ ಲಾರಿ ಮತ್ತು ಒಂದು ಟ್ರಾಕ್ಟರ್ ಬೆಂಕಿಗೆ ಆಹುತಿಯಾಗಿದೆ.
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಘರ್ಷಣೆ ನಡೆದಿದೆ. ಗಲಾಟೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು ಸತೀಶ್ ಪಾಟೀಲ್ ಎಂದು ಗುರುತಿಸಲಾಗಿದೆ. ದೇವಸ್ಥಾನಕ್ಕೆ ಸೇರಿದ ಜಾಗದ ವ್ಯಾಜ್ಯವನ್ನು ಬಗೆಹರಿಸಲು ಎರಡು ಗುಂಪಿನ ಜನ ಸಭೆ ಸೇರಿದ್ದರು.
ಸಭೆಯ ನಡುವೆಯೇ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಬಳಿಕ ಕೆಲ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿ ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಇಡೀ ಗ್ರಾಮವೇ ಬೆಂಕಿಯಲ್ಲಿ ಬೆಂದಿದೆ. ಗಲಾಟೆಯಲ್ಲಿ ಬಲಿಯಾದ ವ್ಯಕ್ತಿಯ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಗ್ರಾಮದಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಸಾಕಷ್ಟು ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.