Pension Golmaal: ಅಂಚೆ ಕಚೇರಿ ನೌಕರರಿಂದಲೇ 1.27 ಕೋಟಿ ರೂಪಾಯಿ ಲೂಟಿ, ಸತ್ತವರ ಹೆಸರಲ್ಲೂ ಗೋಲ್ಮಾಲ್!

ಸತ್ತವರ ಹೆಸರಲ್ಲೂ ಗೋಲ್ಮಾಲ್!
ಗೋಗಿ ಗ್ರಾಮದ ಪಿಂಚಣಿ ಫಲಾನುಭವಿಗಳ ಹೆಸರಿನಲ್ಲಿ ಹಣ ಲಪಾಟಾಯಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ 14 ರಿಂದ ಕಳೆದ ಮೇ ತಿಂಗಳ ವರೆಗಿನ ಸರಕಾರದ ಪಿಂಚಣಿ ಹಣ ಗೋಲ್ ಮಾಲ್ ಮಾಡಲಾಗಿದೆ. ಅಡಿಟ್ ಮಾಡುವಾಗ ಹಣ ಲೂಟಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ಕೂಡ ಖದೀಮರ ಗ್ಯಾಂಗ್ ಹಣ ಕೊಳ್ಳೆ ಹೊಡೆದಿದೆ.
ನಕಲಿ ಸಿಮ್ ಕಾರ್ಡ್ ಪಡೆದು ಗೋಲ್ಮಾಲ್
ಕೆಲ ಫಲಾನುಭವಿಗಳು ಮೃತ ಪಟ್ಟಿದ್ದು ಸತ್ತವರ ಹೆಸರಿನಲ್ಲಿ ಹಣ ದೋಚಲಾಗಿದೆ. 8 ಜನ ಪರಿಚಯಸ್ಥರ ಹೆಸರಿನಲ್ಲಿ 8 ಮೊಬೈಲ್ ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ ಸಿಮ್ ಕಾರ್ಡ್ ಉಪಯೋಗಿಸಿ ಸದರಿ ನಂಬರ್ ಗಳಿಂದ ಲಿಂಕ್ ಮಾಡಿದ ಐಪಿಪಿಬಿ ಖಾತೆಗಳನ್ನು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಳಬಟ್ಟಿ ಶಾಖಾ ಅಂಚೆ ಕಚೇರಿಯಲ್ಲಿ ತೆರೆದು ಮೋಸದಿಂದ ಹಣ ವರ್ಗಾವಣೆ ಮಾಡಿ ಫಲಾನುಭವಿಗಳ ಜೊತೆ ಅಂಚೆ ಇಲಾಖೆಗೆ ವಂಚನೆ ಮಾಡಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುರಪುರ ಉಪವಿಭಾಗದ ಅಂಚೆ ನಿರೀಕ್ಷಕ ಸಹನ್ ಕುಮಾರ ಗೋಗಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಂಚೆ ನೌಕರರಿಂದ ಪಂಗನಾಮ
ಅಂಚೆ ನೌಕರರಾದ ಸರದಾರ ನಾಯಕ ಹಾಗೂ ತ್ರಿಶೂಲ್ ಹಾಗೂ ಸರದಾರ ನಾಯಕ ಅವರ ಮಾವ ಹಾಗೂ ಅಳಿಯನ ವಿರುದ್ಧ ದೂರು ದಾಖಲಾಗಿದೆ. ಸರದಾರ ನಾಯಕ ಮಾವ ಗುರುರಾಜ ಹಾಗೂ ಅಳಿಯ ನಿಲೇಶ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ ಹಣ ಲೂಟಿ ಮಾಡಲಾಗಿದೆ. ಸರದಾರ ನಾಯಕ ತನ್ನ ಹಾಗೂ ಸಂಬಂಧಿಕರ ಖಾತೆಗೆ 77 ಲಕ್ಷ ರೂ ಹಣ ವರ್ಗಾವಣೆ ಮಾಡಿ ಮೋಸ ಮಾಡಿದ್ದಾನೆ. ಅದೇ ರೀತಿ ಅಂಚೆ ನೌಕರ ತ್ರಿಶೂಲ್ ತನ್ನ ಬ್ಯಾಂಕ್ ಖಾತೆಗೆ 49 ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ಹಣ ವಿತ್ ಡ್ರಾ ಮಾಡಿ ಮೋಸ ಮಾಡಿದ್ದಾನೆ.
ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ನೌಕರ
ಪ್ರಕರಣ ದಾಖಲಾಗುವ ಮುನ್ನವೇ ಶಹಾಪುರನಲ್ಲಿ ತ್ರಿಶೂಲ್ ಜೂನ್ 10 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈಲು ಸೇರುವ ಆತಂಕ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಗೋಗಿ ಪೊಲೀಸರು ತನೀಖೆ ನಡೆಸುತ್ತಿದ್ದಾರೆ.
ಸೂಕ್ತ ತನಿಖೆಯ ಭರವಸೆ ನೀಡಿದ ಎಸ್ಪಿ
ಈ ಕುರಿತು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಅಂಚೆ ನೌಕರಿಬ್ಬರು ಸೇರಿ ಪಿಂಚಣಿ ಫಲಾನುಭವಿಗಳ ಹೆಸರಿನಲ್ಲಿ 293 ಫಲಾನುಭವಿಗಳ ಹಣವನ್ನು ವರ್ಗಾವಣೆ ಮಾಡಿಕೊಂಡು ಹಣ ತೆಗೆದುಕೊಂಡು ಮೋಸ ಮಾಡಿದ್ದು, ಇದರಲ್ಲಿರುವ ಓರ್ವ ಆರೋಪಿ ತ್ರಿಶೂಲ ಪ್ರಕರಣ ದಾಖಲಾಗುವ ಮುನ್ನವೇ ಜೈಲು ಸೇರುವ ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ .ಗೋಗಿ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆಂದರು.
ಸಂಕಷ್ಟದಲ್ಲಿ ಪಿಂಚಣಿದಾರರು
ಪಿಂಚಣಿ ಹಣ ಖಾತೆಗೆ ಜಮಾ ಆಗುತ್ತದೆ ಎಂದು ನಂಬಿದ ಫಲಾನುಭವಿಗಳು ಹಣ ಖಾತೆಗೆ ಜಮಾ ಆಗದೆ ಕಂಗಲಾಗಿದ್ದಾರೆ. ಫಲಾನುಭವಿಗಳು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.