ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ!. ಹೊಸ ದರ ಈಗ ಎಷ್ಟಿದೆ ಗೊತ್ತಾ?

ದೆಹಲಿ: ಹಣದುಬ್ಬರ ಏರಿಕೆಯ ನಡುವೆಯೇ ಜನ ಸಾಮಾನ್ಯರಿಗೆ ಕೊಂಚ ನೆಮ್ಮದಿ ಸಿಕ್ಕಿದೆ. ಹೌದು, ಇದೀಗ ಮತ್ತೊಮ್ಮೆ ಖಾದ್ಯ ತೈಲ ಅಂದ್ರೆ, ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆಯಾಗಿದೆ.
ಈಗ ಎಷ್ಟಿದೆ ಅಡುಗೆ ಎಣ್ಣೆ ಬೆಲೆ ?
ಅದಾನಿ ವಿಲ್ಮಾರ್ ಒಂದು ಲೀಟರ್ ಫಾರ್ಚೂನ್ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಬೆಲೆಯನ್ನು ಲೀಟರ್ ಗೆ 220 ರೂ.ನಿಂದ 210 ರೂ.ಗೆ ಇಳಿಸಿದೆ. ಅಂದ್ರೆ, 10 ರೂ. ಕಡಿಮೆಯಾಗಿದೆ. ಈ ಬಗ್ಗೆ ಕಂಪನಿಯು ಪ್ರಕಟಣೆ ಹೊರಡಿಸಿದ್ದು, ಒಂದು ಲೀಟರ್ ಸಾಸಿವೆ ಎಣ್ಣೆಯ ಬೆಲೆಯನ್ನು ಸಹ ರೂ.205 ರಿಂದ ರೂ.195 ಕ್ಕೆ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದೆ. ಇದಲ್ಲದೆ, ಜೆಮಿನಿ ಎಡಿಬಲ್ ಮತ್ತು ಫ್ಯಾಟ್ಸ್ ಕೂಡ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆಯ ಪ್ಯಾಕೆಟ್ ಮೇಲೆ ರೂ.15 ಕಡಿತಗೊಳಿಸಿದೆ. ಆದ್ರೆ, ಕಂಪನಿಯು ಬೆಲೆಯನ್ನು ಮತ್ತಷ್ಟು ಕಡಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರವು ತಾಳೆ ಎಣ್ಣೆಯಿಂದ ಆಮದು ಸುಂಕವನ್ನು ಕಡಿತಗೊಳಿಸಿದ ನಂತರ, ಖಾದ್ಯ ತೈಲ ಕಂಪನಿಗಳು ಸಹ ಬೆಲೆಯನ್ನು ಕಡಿಮೆ ಮಾಡಿರುವುದು ಗಮನಿಸಬೇಕಾದ ಸಂಗತಿ. ಕಂಪನಿಗಳು, ‘ನಾವು ಪಡೆಯುತ್ತಿರುವ ಪ್ರಯೋಜನಗಳನ್ನು ಗ್ರಾಹಕರಿಗೂ ವರ್ಗಾಯಿಸಲು ಬಯಸುತ್ತೇವೆ’ ಎಂದು ಹೇಳಿದೆ.
ಮತ್ತಷ್ಟು ಬೆಲೆ ಕುಸಿಯಬಹುದು?
ಭಾರತ ಸರ್ಕಾರವು ಇಂಡೋನೇಷ್ಯಾಕ್ಕೆ ಗೋಧಿಯನ್ನು ರಫ್ತು ಮಾಡುತ್ತದೆ ಮತ್ತು ಬದಲಿಗೆ ಅಲ್ಲಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಆದರೆ, ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೀಗಾದರೆ ಮುಂಬರುವ ದಿನಗಳಲ್ಲಿ ಖಾದ್ಯ ತೈಲದ ಬೆಲೆ ಕುಸಿಯಬಹುದು ಎನ್ನಲಾಗಿದೆ.