ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ ನೂಪುರ್ ಶರ್ಮಾ

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಜೀವ ಬೆದರಿಕೆ ಉಲ್ಲೇಖಿಸಿ ಕೋಲ್ಕತ್ತಾ ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ.
ಸೋಮವಾರ ಜೂನ್ 20 ರಂದು ನರ್ಕೆಲ್ದಂಗ ಪೊಲೀಸರ ಮುಂದೆ ಹಾಜರಾಗುವಂತೆ ಕೋಲ್ಕತ್ತಾ ಪೊಲೀಸರು ನೀಡಿರುವ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ನೂಪರ್ ಮೇಲ್ ಮೂಲಕ ಪತ್ರವನ್ನು ಕಳುಹಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳಿಗಾಗಿ ನೂಪರ್ ವಿರುದ್ಧ ನರ್ಕೆಲ್ದಂಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ಠಾಣೆಯಲ್ಲಿ ಖುದ್ದಾಗಿ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಬೇಕೆಂದು ಪತ್ರದಲ್ಲಿ ನೂಪರ್ ಕೋರಿದ್ದಾರೆ.
ಆಡಳಿತಾರೂಢ ಬಿಜೆಪಿಯ ವಕ್ತಾರರಾಗಿದ್ದ ನೂಪುರ್ ಶರ್ಮಾ ಮೇ ತಿಂಗಳ ಕೊನೆಯಲ್ಲಿ ಟಿವಿ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಹೇಳಿಕೆ ನೀಡಿದ್ದರು. ಇದು ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಖತರ್, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ಕನಿಷ್ಠ 14 ರಾಷ್ಟ್ರಗಳು ಈ ಹೇಳಿಕೆ ಕುರಿತು ಭಾರತವನ್ನು ತರಾಟೆಗೆ ತೆಗೆದುಕೊಂಡಿವೆ.