ಮೋದಿ ಭೇಟಿ ಹಿನ್ನಲೆಯಲ್ಲಿ ಶಾಲೆ ಬಂದ್: ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆ

ಬೆಂಗಳೂರು, ಜೂ. 20: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಬೆಂಗಳೂರಿನಲ್ಲಿ ಐಐಎಸ್‌ಸಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಮೋದಿ ಭೇಟಿ ಹಿನ್ನಲೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಯಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಶಾಲೆಗಳನ್ನು ಮುಚ್ಚಿರುವುದು ಸಮರ್ಥನೀಯವೇ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರು ಆಗಿರುವ ಅಂಜಲಿ ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಶಿಕ್ಷಣ ಎಂತಹ ತಮಾಷೆಯಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಅಂಜಲಿ ನಿಂಬಾಳ್ಕರ್ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ಆಗುವ ಕಾರಣವನ್ನು ಉಲ್ಲೇಖಿಸಿ ಪ್ರಧಾನಿಗಳ ಭೇಟಿಯಿಂದಾಗಿ ಬೆಂಗಳೂರಿನಲ್ಲಿ ಸೋಮವಾರ ಶಾಲೆಗಳನ್ನು ಬಂದ್ ಮಾಡಿಸಲಾಗಿದೆ. ಇದು ಸಹ ಸಮರ್ಥನೆಯೇ? ವಿದ್ಯಾವಂತ ವರ್ಗ ಎಂದು ಕರೆಯಲ್ಪಡುವವರು ಇದನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ? ಕರ್ನಾಟಕದಲ್ಲಿ ಶಿಕ್ಷಣ ಎಂತಹ ತಮಾಷೆಯಾಗಿದೆ? ಜೂನ್ 20 ಸೋಮವಾರದಂದು ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
Schools closed on Monday in Bengaluru due to Prime Ministers visit.
Cited reason traffic.
Is this even justified?How the so called educated class is tolerating this?
Even media is not showing anything…
What a joke education has become in Karnataka ? pic.twitter.com/lCPzB3xuP9
— Dr Anjali Nimbalkar (@DrAnjaliTai) June 20, 2022
ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಟ್ವೀಟ್‌ನೊಂದಿಗೆ ಶಾಲೆಯೊಂದು ಅಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಕಳುಹಿಸಿದ ಸುತ್ತೋಲೆಯ ಚಿತ್ರವನ್ನು ಲಗತ್ತಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಶಾಲೆಯು ರಜೆ ನೀಡಲಾಗಿದೆ ಎಂದು ಪತ್ರದಲ್ಲಿ ಹೇಳಿದೆ.
ಪತ್ರದಲ್ಲಿ ಜೂನ್ 20ರಂದು ಬೆಂಗಳೂರಿಗೆ ಪ್ರಧಾನ ಮಂತ್ರಿಯವರ ಭೇಟಿಯಿಂದಾಗಿ ಪ್ರಮುಖ ಟ್ರಾಫಿಕ್ ನಿರ್ಬಂಧಗಳಿರುವ ಸಾಧ್ಯತೆಯಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ನಾವು ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ಸೋಮವಾರ ಮುಚ್ಚುತ್ತಿದ್ದೇವೆ. ನಾವು ಆನ್‌ಲೈನ್ ತರಗತಿಗಳನ್ನು ನೀಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನಾವು ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಸುತ್ತೋಲೆ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮತ್ತು ಮಂಗಳವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇತರ ಕಾರ್ಯಕ್ರಮಗಳ ಜೊತೆಗೆ ಅವರು ಬೆಂಗಳೂರಿನಲ್ಲಿ ಸೋಮವಾರ 27,000 ಕೋಟಿ ವೆಚ್ಚದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಜೂನ್ 21 ಮಂಗಳವಾರ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಮೈಸೂರು ಅರಮನೆ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.