ಪ್ರತಿಭಟನೆಗೆ ಹೊರಟವರಿಗೆ ತಿಂಡಿ ಕೊಟ್ಟು ಕಳುಹಿಸಿದ ಚಿಕ್ಕೋಡಿ ಪೊಲೀಸರು!
ಚಿಕ್ಕೋಡಿ ಪೊಲೀಸರ ಕೆಲಸಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಚಿಕ್ಕೋಡಿ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಇದಾಗಲೇ ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ, ರೈಲಿಗೆ ಬೆಂಕಿಯನ್ನೂ ಹಚ್ಚಿದ್ದರೆ, ಕೆಲವರು ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಚಿಕ್ಕೋಡಿಯಲ್ಲಿಯೂ ಅಗ್ನಿಪಥ್ ವಿರೋಧಿಸಿ ಕೆಲವು ಯುವಕರ ಗುಂಪು ಪ್ರತಿಭಟನೆಗೆ ಮುಂದಾಗಿತ್ತು. ಬೆಳಗಾವಿಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಈ ಯುವಕರು ಹೊರಟಿದ್ದರು. ಆದರೆ ಪ್ರತಿಭಟನೆಯಿಂದ ಏನೂ ಪ್ರಯೋಜನವಿಲ್ಲ, ಸುಮ್ಮನೆ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಚಿಕ್ಕೋಡಿ ಪೊಲೀಸರು ಯುವಕರ ಮನವೊಲಿಸಿ ವಾಪಸ್ ಕಳಿಸಿದ್ದು, ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಅಗ್ನಿಪಥ್ ಯೋಜನೆಯಡಿ ಯುವಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಇದರಲ್ಲಿ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಇದಾಗಲೇ ಹೇಳಿದೆ. ಈ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದು ಪೊಲೀಸರು ಮನವೊಲಿಸಿದ್ದಾರೆ.
ಭವಿಷ್ಯ ಹಾಳ್ ಮಾಡ್ಕೊಬೇಡ್ರಪ್ಪ ಮನೆಗ್ ಹೋಗಿ ಅಂತ ಹೇಳಿದ್ದೂ ಅಲ್ಲದೇ, ಪ್ರತಿಭಟನೆಗೆ ಬಂದಿರುವ ಯುವಕರಿಗೆ ಪೊಲೀಸರೇ ಊಟದ ವ್ಯವಸ್ಥೆ ಮಾಡಿ ಊಟ ಬಡಿಸಿ ಮನೆಗೆ ವಾಪಸ್ ಕಳಿಸಿದ್ದಾರೆ. ಚಿಕ್ಕೋಡಿ ಬಸ್ ನಿಲ್ದಾಣದಲ್ಲಿಯೇ ಯುವಕರಿಗೆ 20ಕ್ಕೂ ಅಧಿಕ ಪೊಲೀಸರು ತಿಂಡಿ ವ್ಯವಸ್ಥೆ ಮಾಡಿದ್ದರು.