ಅಮಿತ್ ಶಾ ತಮ್ಮ ಮಗನನ್ನು ಅಗ್ನಿಪಥ್ ಯೋಜನೆಗೆ ಕಳುಹಿಸಲಿ; ’ಅಗ್ನಿವೀರ’ರನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಕ ಎಂದ ಬಿಜೆಪಿ ಲೀಡರ್; ತಿರುಗೇಟು ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

ಅಮಿತ್ ಶಾ ತಮ್ಮ ಮಗನನ್ನು ಅಗ್ನಿಪಥ್ ಯೋಜನೆಗೆ ಕಳುಹಿಸಲಿ; ’ಅಗ್ನಿವೀರ’ರನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಕ ಎಂದ ಬಿಜೆಪಿ ಲೀಡರ್; ತಿರುಗೇಟು ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರುದ್ಧ ಕಿಡಿಕಾರಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ತಾತ್ಕಾಲಿಕ ನೇಮಕಾತಿ ಮಾಡಿಕೊಂಡು ಬಳಿಕ ತೆಗೆದು ಹಾಕಿದರೆ ಮುಂದೆ ಯುವಕರ ಗತಿಯೇನು? ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಅಗ್ನಿಪಥ್ ಯೋಜನೆ ಮೂಲಕ ತಾತ್ಕಾಲಿಕವಾಗಿ ಸೇನಾ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 4 ವರ್ಷದ ಬಳಿಕ ಅವರನ್ನು ತೆಗೆದುಹಾಕಲಾಗುತ್ತದೆ. ನಾಲ್ಕು ವರ್ಷದ ಬಳಿಕ ಅಗ್ನಿವೀರರ ಭವಿಷ್ಯವೇನು? ಭದ್ರತೆಯೇನು? ಈ ಬಗ್ಗೆ ಯೋಜನೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
75 ವರ್ಷವಾದರೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವೃತ್ತಿಯಾಗಿಲ್ಲ, 71 ವರ್ಷವಾದ ಪ್ರಧಾನಿಯವರಿದ್ದಾರೆ. ನಮ್ಮಲ್ಲಿ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್ ಸಿ ಆಗಿದ್ದಾರೆ. ಹೀಗಿರುವಾಗ 21-25 ವರ್ಷಕ್ಕೆ ನಿವೃತ್ತಿಯಾಗೋದನ್ನು ಯುವಕರು, ಅವರ ತಂದೆ-ತಾಯಿ ಸಹಿಸಿಕೊಳ್ತಾರಾ? ಉದ್ಯೋಗ ಭದ್ರತೆ ಇರಬೇಕು ಎಂಬುದಷ್ಟೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.
ನಿನ್ನೆ ಬಿಜೆಪಿ ಮುಖಂಡರೊಬ್ಬರು ಹೇಳುತ್ತಿದ್ದಾರೆ ಅಗ್ನಿಪಥ್ ನಿಂದ ನಿವೃತ್ತಿಯಾದ ಅಗ್ನಿವೀರರನ್ನು ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ಳುತ್ತೇವೆ ಎಂದು. ಅಂದರೆ ಇವರ ಮನಸ್ಥಿತಿ ಯಾವ ಮಟ್ಟಕ್ಕೆ ಇದೆ ಎಂಬುದು ಇದರಿಂದಲೇ ಗೊತ್ತಾಗುತ್ತಿದೆ. ಹಾಗಾದರೆ ಅಮಿತ್ ಶಾ ಪುತ್ರ, ಜಯ ಶಾ ಅವರನ್ನೇ ಅಗ್ನಿಪಥ್ ಕೆಲಸಕ್ಕೆ ಕಳುಹಿಸಲಿ ಎಂದು ಆಗ್ರಹಿಸಿದರು.
16 ಕೋಟಿ ಉದ್ಯೋಗ ಕೊಡಲು ಸಾಧ್ಯವಾಗದೇ ಅದನ್ನು ಮುಚ್ಚಿ ಹಾಕಲು ಈಗ ಏಕಾಏಕಿ ಅಗ್ನಿಪಥ್ ಎಂಬ ಭಯಾನಕ ಯೋಜನೆ ಡ್ರಾಮಾ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಮಂತ್ರಿಗಳು, ಶಾಸಕರು ತಮ್ಮ ಮಕ್ಕಳನ್ನು ಈ ಯೋಜನೆಗೆ ಕಳುಹಿಸಲಿ, ಬಡವರ ಮಕ್ಕಳನ್ನು ತಾತ್ಕಾಲಿಕ ನೇಮಕಾತಿಗೆ ಸೇರಿಸಿ ಕೈಬಿಡುವ ಯೊಜನೆ ಜಾರಿಯ ಉದ್ದೇಶವೇನು ಎಂದು ಕಿಡಿಕಾರಿದ್ದಾರೆ.