ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ತಂಡದ ನಾಯಕ ಸೇರಿದಂತೆ ಇಬ್ಬರು ಶೂಟರ್‌ಗಳ ಬಂಧನ

ಹೊಸದಿಲ್ಲಿ, ಜೂ. 20: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಂಡದ ಮುಖ್ಯಸ್ಥ ಸೇರಿದಂತೆ ಇಬ್ಬರು ಮುಖ್ಯ ಶೂಟರ್‌ಗಳನ್ನು ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಜೂನ್ 20ರಂದು ಬಂಧಿಸದೆ.
ಸಿಧು ಮೂಸೆವಾಲ ಅವರ ಹತ್ಯೆಗೆ ಸಹಕಾರ ನೀಡಿದ ಮೂರನೇ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದೆ.
ಅಲ್ಲದೆ, ದೊಡ್ಡ ಸಂಖ್ಯೆಯ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಪತ್ತೆ ಮಾಡಲಾಗಿದೆ.
”ಇಬ್ಬರು ಶೂಟರ್‌ಗಳಲ್ಲಿ ಓರ್ವ ತಂಡದ ನಾಯಕ” ಎಂದು ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳನ್ನು ಹರ್ಯಾಣದ ಸೋನಿಪತ್‌ನ ನಿವಾಸಿ ಪ್ರಿಯಾವ್ರತ್ ಆಲಿಯಾಸ್ ಫೌಜಿ (26) ಹಾಗೂ ಕೈಲಾಶ್ ಆಲಿಯಾಸ್ ಕುಲದೀಪ್ (24) ಎಂದು ಗುರುತಿಸಲಾಗಿದೆ.
ಭೂಗತ ಪಾತಕಿಗಳ ‘ಬೊಲೆರೋ ತಂಡ’ದ ನಾಯಕನಾಗಿದ್ದ ಪ್ರಿಯಾವ್ರತ್ ಶೂಟರ್‌ಗಳ ತಂಡದ ನಾಯಕತ್ವ ವಹಿಸಿದ್ದ. ಈತ ಘಟನೆ ನಡೆಯುವ ಸಂದರ್ಭ ಗೋಲ್ಡಿ ಬ್ರಾರ್‌ನೊಂದಿಗೆ ನೇರ ಸಂಬಂಧ ಇರಿಸಿಕೊಂಡಿದ್ದ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಿಯಾವ್ರತ್ ಮುಖ್ಯ ಶೂಟರ್ ಆಗಿದ್ದ ಹಾಗೂ ಹತ್ಯೆಯನ್ನು ಕಾರ್ಯಗತಗೊಳಿಸಿದ್ದ. ಘಟನೆಯ ಮುನ್ನ ಫತೇಗಢ ಪೆಟ್ರೋಲ್ ಪಂಪ್‌ನಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಇದನ್ನು ಕಾಣಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಸುಲಿಗೆ ಹಣಕ್ಕಾಗಿ ಕರೆ ಮಾಡಿದ ಪ್ರತ್ಯೇಕ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದ ಕೆನಡಾ ಮೂಲದ ಭೂಗತ ಪಾತಕಿ ಸತಿಂದರ್ ಸಿಂಗ್ ಆಲಿಯಾಸ್ ಗೋಲ್ಡಿ ಬ್ರಾರ್‌ನನ್ನು ಜೂನ್ 19ರಂದು ಪೊಲೀಸರು ಬಂಧಿಸಿದ್ದರು.