ಬೆಳಗಾವಿಯಲ್ಲಿ ಬಂದ್ ಯತ್ನ ವಿಫಲ

ಬೆಳಗಾವಿ: ‘ಅಗ್ನಿಪಥ’ ಯೋಜನೆ ವಿರೋಧಿಸಿ ಸೋಮವಾರ ಕರೆ ನೀಡಿದ್ದ ಬೆಳಗಾವಿ ಬಂದ್ ಹಾಗೂ ಬೃಹತ್ ಪ್ರತಿಭಟನೆ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ನಗರದಲ್ಲಿ ಇಡೀ ದಿನ ಶಸ್ತ್ರಸಜ್ಜಿತ ಪೊಲೀಸರೇ ಕಾಣಿಸಿದರು.
ಕ್ಷಿಪ್ರಕಾರ್ಯ ಪಡೆಯ ಮೂರು ತುಕಡಿಗಳು, ಕೆಎಸ್‌ಆರ್‌ಪಿ ಪೊಲೀಸರು ಬೆಳಿಗ್ಗೆಯಿಂದಲೇ ಪಥಸಂಚಲನ ನಡೆಸಿ, ಶಾಂತಿ ಕದಡದಂತೆ ಎಚ್ಚರಿಕೆ ಕೊಟ್ಟರು.
ಮುಂಜಾಗ್ರತೆಯಾಗಿ ಜಲಫಿರಂಗಿ ವಾಹನ ತರಿಸಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಡ್ರೋನ್ ಮೂಲಕ ಕಣ್ಗಾವಲು ಇಡಲಾಗಿತ್ತು.
ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲೂ ಚೆಕ್‌ಪೋಸ್ಟ್ ನಿರ್ಮಿಸಿದ್ದ ಪೊಲೀಸರು, ಗುಂಪು ಸೇರಿದ್ದ 265ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಕಲಬುರಗಿಯಲ್ಲಿ ಬಂಧನ
ಕಲಬುರಗಿ ವರದಿ: ಯುವಕರಿಗೆ ತರಬೇತಿ ನೀಡಿ ನಾಲ್ಕು ವರ್ಷ ಸೇನೆಗೆ ಸೇರಿಸಿಕೊಳ್ಳುವ ಅಗ್ನಿಪಥ್ ಯೋಜನೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆಗೆ ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ನಗರದ ಸರ್ದಾರ್ ವಲ್ಲಭ ಭಾಯ್ ಪಟೇಲ್ (ಎಸ್‌ವಿಪಿ) ವೃತ್ತದಿಂದ ರೈಲು ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ರೈಲ್ವೆ ನಿಲ್ದಾಣದ ಎದುರು ಪ್ರತಿಭಟಿಸಲು ಕಾರ್ಯಕರ್ತರು ಉದ್ದೇಶಿಸಿ ದ್ದರು. ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು. ಕಾರ್ಯಕರ್ತರು ಪ್ರತಿ ಭಟನೆಗೆ ಮುಂದಾದಕೂಡಲೇ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.