ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ಹಿಂಪಡೆಯಬೇಕು ಹಾಗೂ ಎಲ್ಲ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭೂ ಸುಧಾರಣಾ ಕಾಯ್ದೆ ರೈತರಿಗೆ ಮಾರಕವಾಗಿದ್ದು, ಅದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ರೈತರು ಕೃಷಿಗಾಗಿ ಮಾಡಿದ ಎಲ್ಲ ಸಾಲಗಳನ್ನೂ ಮನ್ನಾ ಮಾಡಬೇಕು, ಬೀಜ- ಗೊಬ್ಬರಗಳನ್ನು ಉಚಿತವಾಗಿ ನೀಡಬೇಕು ಎಂದೂ ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಿಜ್ಜೂರ, ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪ ಪಾಟೀಲ, ಸಂಚಾಲಕ ರಾಮನಗೌಡ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಪಾಟೀಲ, ಉಪಾಧ್ಯಕ್ಷೆ ಭಾಗ್ಯಶ್ರೀ ಕುರಗುಂದ, ರಾಜ್ಯ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯ್ಕರ್ ನೇತೃತ್ವ ವಹಿಸಿದ್ದರು.