ಉದ್ಧವ್ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆ ದೂರು

ಮುಂಬೈ: ಕೋವಿಡ್-19 ದೃಢಪಟ್ಟಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ರಾತ್ರಿ ತಮ್ಮ ಅಧಿಕೃತ ಮನೆ ‘ವರ್ಷ’ದಿಂದ ತಮ್ಮ ವೈಯಕ್ತಿಕ ನಿವಾಸ ‘ಮಾತೋಶ್ರೀ’ಗೆ ತೆರಳುತ್ತಿದ್ದಾಗ ಬೆಂಬಲಿಗರನ್ನು ಭೇಟಿ ಮಾಡುವ ಮೂಲಕ ಕೋವಿಡ್ ಸಂಬಂಧಿತ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ.
ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಮಲಬಾರ್ ಹಿಲ್ ಪೊಲೀಸರಿಗೆ ಠಾಕ್ರೆ ವಿರುದ್ಧ ಆನ್‌ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಿವಸೇನಾ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಿವಸೇನಾ ಶಾಸಕರು ಬಂಡಾಯ ಎದ್ದಿರುವ ಕಾರಣ, ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಪ್ರಸ್ತಾಪಿಸಿದ ಬಳಿಕ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸದಿಂದ ಕುಟುಂಬ ಸಮೇತ ತೆರಳಿದರು.
ಪ್ರತ್ಯೇಕವಾಸದಲ್ಲಿ ಇರಬೇಕಾದ ಮುಖ್ಯಮಂತ್ರಿ ಠಾಕ್ರೆ ಅವರು
ಶಿಷ್ಟಾಚಾರವನ್ನು ಉಲ್ಲಂಘಿಸಿರುವುದು ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿದೆ. ಹೀಗಾಗಿ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಬಗ್ಗಾ ಅವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಬಂಡಾಯ ಗುಂಪುಸೇರಿದ ನಾಲ್ವರು ಶಾಸಕರು: ಬಂಡಾಯ ಎದ್ದಿರುವ ಶಿವಸೇನಾ ಶಾಸಕರ ಗುಂಪನ್ನು ಮಹಾರಾಷ್ಟ್ರದ ನಾಲ್ವರು ಶಾಸಕರು ಮತ್ತೊಂದು ಚಾರ್ಟರ್ಡ್ ವಿಮಾನ ದಲ್ಲಿ ಗುಜರಾತ್‌ನ ಸೂರತ್ ಮೂಲಕ ಅಸ್ಸಾಂನ ಗುವಾಹಟಿಗೆ ಬುಧವಾರ ಬಂದಿಳಿದರು.
ಶಾಸಕರಾದ ಚಂದ್ರಕಾಂತ್ ಪಾಟೀಲ್, ಯೋಗೇಶ್ ಕದಂ, ಮಂಜುಳಾ ಗಾವಿತ್ ಮತ್ತು ಗುಲಾ ಬ್ರಾವ್ ಪಾಟೀಲ್ ಅವರು ಏಕನಾಥ್ ಶಿಂಧೆ ಅವರ ತಂಡ ಸೇರಿದವರು.
‘ಬಹುಮತ ಸಾಬೀತುಪಡಿಸುತ್ತೇವೆ’
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಅಗತ್ಯವಿದ್ದರೆ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತು ಪಡಿಸುತ್ತದೆ ಎಂದು ಶಿವಸೇನೆಯ ಮುಖ್ಯ ವಕ್ತಾರ ಸಂಜಯ್ ರಾವುತ್ ಪ್ರತಿಪಾದಿಸಿದ್ದಾರೆ.