Karnataka News
ಸಬ್ ರಿಜಿಸ್ಟರ್ ಕಚೇರಿಯ ಕಿಟಕಿ ಮುರಿದು ಕಳ್ಳತನಕ್ಕೆ ಯತ್ನ

ಕುಣಿಗಲ್: ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯ ಕಿಟಕಿಯ ಸರಳನ್ನು ಮುರಿದು, ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕಳ್ಳರು ಬುಧವಾರ ಮಧ್ಯ ರಾತ್ರಿಯಲ್ಲಿ ಕಚೇರಿಯ ಕಿಟಕಿ ಕಬ್ಬಿಣ ಮುರಿದು ಕಚೇರಿ ಒಳಗೆ ಪ್ರವೇಶಿಸಿ, ಬೀರುವಿನ ಬೀಗ ಹೊಡೆದು, ಬೀರಿನಲ್ಲಿ ಇದ್ದ ಸೀಡಿ ಬಾಕ್ಸ್ ಗಳನ್ನು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಅಲ್ಲದೆ, ಇತರೆ ಎಲ್ಲಾ ಕಡೆ ಹಣಕ್ಕಾಗಿ ಹುಡುಕಾಡಿದ್ದಾರೆ. ಆದರೆ ಯಾವುದೇ ನಗದು ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲದಂತೆ ಕಳ್ಳರು ತೆರಳಿದ್ದಾರೆ. ಎಂದಿನಂತೆ ಗುರುವಾರ ಕಚೇರಿಗೆ ಉಪನೊಂದಣಾಧಿಕಾರಿ ಯಶೋದ ಆಗಮಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.
ಪಟ್ಟಣದ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.