Karnataka NewsPolitics
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ನಗರಕ್ಕೆ ವಾಪಸ್ ಸಂಪುಟ ವಿಸ್ತರಣೆ ಚರ್ಚೆ ಇಲ್ಲ

ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ನಗರಕ್ಕೆ ವಾಪಸ್ ಆಗಲಿದ್ದು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ ಮಂಡಳಿಗಳಿಗೆ ನೇಮಕ ಕುರಿತು ಯಾವುದೇ ಚರ್ಚೆ ನಡೆದಿಲ್ಲ.
ರಾಷ್ಟ್ರಪತಿ ಚುನಾವಣೆ ಎನ್‌ಡಿಎ ಅಭ್ಯರ್ಥಿಗೆ ಸೂಚಕರಾಗಿ ನಾಮಪತ್ರಕ್ಕೆ ಸಹಿ ಹಾಕಲು ವರಿಷ್ಠರ ಬುಲಾವ್ ಮೇರೆಗೆ ತೆರಳಿದ್ದ ಮುಖ್ಯಮಂತ್ರಿಯವರು ಶುಕ್ರವಾರ ಬೆಳಗ್ಗೆ ಆ ಕೆಲಸ ಮುಗಿದ ನಂತರ ಮಧ್ಯಾಹ್ನ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಗುರುವಾರ ದೆಹಲಿಗೆ ತೆರಳಿದ ಮುಖ್ಯಮಂತ್ರಿಯವರು ಪ್ರಹ್ಲಾದ್ ಜೋಶಿಯವರ ನಿವಾಸದಲ್ಲಿದ್ದು, ಯಾರನ್ನೂ ಭೇಟಿ ಮಾಡಲಿಲ್ಲ. ಶುಕ್ರವಾರವೂ ಯಾರ ಭೇಟಿ ನಿಗದಿಯಾಗಿಲ್ಲ ಎಂದು ಹೇಳಲಾಗಿದೆ.
ಕೇಂದ್ರದ ಬಿಜೆಪಿ ನಾಯಕರು ಮಹಾರಾಷ್ಟ್ರ ವಿದ್ಯಮಾನಗಳ ಬಗ್ಗೆ ಬ್ಯುಸಿ ಇರುವ ಕಾರಣ ಯಾರನ್ನೂ ಭೇಟಿ ಮಾಡಲಿಲ್ಲ ಎಂದು ತಿಳಿದು ಬಂದಿದೆ.