ಆಟೋ ಕಿಂಗ್ ಕೊಲೆ: ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳು

ಈ ಘಟನೆಯಿಂದಾಗಿ ಹಳೇ ಹುಬ್ಬಳ್ಳಿ ಮಂದಿ ಮತ್ತೆ ಬೆಚ್ಚಿಬಿದ್ದಿದ್ದಾರೆ. ಇದರ ಜೊತೆಗೆ ಆಟೋ ಚಾಲಕನ ಪೂರ್ವಾಪರ ನೋಡಿದಾಗ ಕೊಲೆ ಬಗ್ಗೆ ಹತ್ತಾರು ಅನುಮಾನಗಳೆದ್ದಿವೆ. ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ನೆತ್ತರು ಹರಿದಿದೆ.
ಆಟೋ ಕಿಂಗ್ ಕೊಲೆ
ಆಟೋ ಕಿಂಗ್ ಎನಿಸಿಕೊಳ್ಳುತ್ತಿದ್ದ ಚಂದ್ರಶೇಖರ್ ಎಂಬವನ ಪ್ರಾಣಪಕ್ಷಿ ಹಾರಿಹೋಗಿದೆ. ತಮ್ಮ ತಂಗಿಗೆ ತೊಂದರೆ ನೀಡುತ್ತಿದ್ದ ಎಂಬ ಕಾರಣಕ್ಕಾಗಿ ಕಿರಣ್ ಭಜಂತ್ರಿ ಹಾಗೂ ಅಭಿಷೇಕ್ ಭಜಂತ್ರಿ ಎಂಬ ಯುವಕರು ಚಂದ್ರಶೇಖರ್ ಎಂಬವನಿಗೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾರೆ.
ಚಂದ್ರಶೇಖರ್ ಕಳೆದ ಹಲವಾರು ದಿನಗಳಿಂದ ಕಿರಣ್ ಮತ್ತು ಅಭಿಷೇಕನ ತಂಗಿಗೆ ಕರೆ ಮಾಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡು ಧಾರವಾಡ ಕಾಲೋನಿಯ ಹೋಟೆಲೊಂದರ ಬಳಿ ನಿಂತಿದ್ದ ಚಂದ್ರಶೇಖರ್ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಸಾವು
ತೀವ್ರವಾಗಿ ಗಾಯಗೊಂಡಿದ್ದ ಚಂದ್ರಶೇಖರ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರೋದಾಗಿ ಪೊಲೀಸ್ ಆಯುಕ್ತ ಲಾಭೂ ರಾಮ್ ಮಾಹಿತಿ ನೀಡಿದ್ದಾರೆ.
ಆದ್ರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯ ಹಿಂದೆ ಅಕ್ರಮ ಸಂಬಂಧದ ಘಾಟೂ ಕೇಳಿ ಬರುತ್ತಿದೆ. ಚಂದ್ರಶೇಖರ್ ಗೆ ಈಗಾಗಲೇ ಎರಡು ವರ್ಷದ ಹಿಂದೆಯೇ ಮದುವೆಯಾಗಿದೆ. ಇನ್ನು ಕೊಲೆ ಮಾಡಿದ ಕಿರಣ್ ಮತ್ತು ಅಭಿಷೇಕ್ ತಂಗಿಗೂ ಸಹ ಮದುವೆಯಾಗಿದ್ದು, ಸದ್ಯ ಗಂಡನನ್ನು ಬಿಟ್ಟು ಮನೆಯಲ್ಲಿದ್ದಾಳೆ. ಈಕೆಯ ಜೊತೆಗೆ ಆಟೋ ಚಾಲಕ ಚಂದ್ರು ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕಾಗಿ ಆಕೆಯ ಅಣ್ಣಂದಿರಿಬ್ಬರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆದ್ರೆ ಈ ಆರೋಪವನ್ನ ಮೃತನ ಕುಟುಂಬಸ್ಥರು ತಳ್ಳಿ ಹಾಕಿದ್ದು, ವೈಯಕ್ತಿಕ ದ್ವೇಷಕ್ಕೆ ಈ ಕೊಲೆ ಮಾಡಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಹಲವು ಆಯಾಮಗಳಲ್ಲಿ ತನಿಖೆ
ಮತ್ತೊಂದು ಕಡೆ ಚಂದ್ರಶೇಖರ್ ಹಿನ್ನೆಲೆ ಸಹ ಬಹಳಷ್ಟು ಕೆಟ್ಟದಾಗಿದ್ದು, ವೈಯಕ್ತಿಕ ದ್ವೇಷಕ್ಕೆ ಈ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಪ್ರಕರಣದ ಬೆನ್ನು ಹತ್ತಿರುವ ಖಾಕಿಪಡೆ ಈಗಾಗಲೇ ಆರೋಪಿಗಳಾದ ಕಿರಣ್ ಮತ್ತು ಅಭಿಷೇಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹತ್ಯೆಯ ಸಂಚಿನ ಬಗ್ಗೆ ಸ್ಪಷ್ಟತೆಯಿಲ್ಲ ಹತ್ತಾರು ಆಯಾಮದಲ್ಲಿ ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಕೊಲೆಗೆ ಪ್ರಮುಖ ಕಾರಣವಾದ್ರೂ ಏನ ಎಂಬುದರ ಕುರಿತು ಆರೋಪಿಗಳಿಂದ ಮಾಹಿತಿ ಕಲೆಹಾಕುವ ಮೂಲಕ ಕೊಲೆಯ ಮುಖ್ಯ ರೂವಾರಿಗಳನ್ನ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೊಲೆ ಮಾಡುವ ವೇಳೆ ಕಿರಣ್ ಮತ್ತು ಅಭಿಷೇಕ್ ಮಾತ್ರ ಇರಲಿಲ್ಲ. ಅವರ ಜೊತೆ ನಾಲ್ಕೈದು ಜನ ಇದ್ದರೂ. ಅವರನ್ನೂ ಬಂಧಿಸಿ ವಿಚಾರಣೆಗೆ ಗುರಿಪಡಿಸಬೇಕೆಂದು ಮೃತನ ತಾಯಿ ಶೋಭಾ ಆಗ್ರಹಿಸಿದ್ದಾರೆ.
ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳು
ಒಟ್ಟಿನಲ್ಲಿ ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಿದ್ದ ಆಟೋ ಚಾಲಕ, ತನ್ನ ಕೆಟ್ಟ ಚಾಳಿಯಿಂದ ಪ್ರಾಣಕ್ಕೆ ಕುತ್ತು ತಂದುಕೊಂಡಿರುವುದು ವಿಪರ್ಯಾಸ. ಇನ್ನು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ನೆತ್ತರು ಹರಿಯುತ್ತಿದ್ದು, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ. ಇನ್ನಾದ್ರೂ ಪೊಲೀಸ್ ಇಲಾಖೆ ಹದಗೆಟ್ಟ ಈ ಕಾನೂನು ಸುವ್ಯವಸ್ಥೆ ಕಾಪಾಡೋ ಕೆಲಸ ಮಾಡಬೇಕಿದೆ.