
ಮುಂಬೈ, ಜೂನ್ 25: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಬಂಡಾಯ ನಾಯಕ ಏಕನಾಥ್ ಶಿಂಧೆ ಎಸೆದ ಸವಾಲ್ ಎದುರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಶನಿವಾರ ಸಿಎಂ ಉದ್ಧವ್ ಠಾಕ್ರೆ ಬಣದ ಶಾಸಕರ ಮಹತ್ವದ ಸಭೆ ಕರೆಯಲಾಗಿದ್ದು, ಮುಂದಿನ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುತ್ತದೆ.
ಇದರ ಮಧ್ಯೆ ಇತ್ತೀಚಿನ ಶಿವಸೇನೆ ಶಾಸಕಾಂಗ ಪಕ್ಷದ ಸಭೆಗೆ “ಹಾಜರಾಗದ” ಏಕನಾಥ್ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ವಿಧಾನಸಭೆಯ ಉಪಸಭಾಪತಿಗೆ ಮನವಿ ಸಲ್ಲಿಸಲಾಗಿದೆ.
ಗುವಾಹಟಿಯಲ್ಲಿ ಶಾಸಕರ ಜೊತೆ ಇದ್ದ ಬಂಡಾಯ ನಾಯಕ ಏಕನಾಥ್ ಶಿಂಧೆ ಈಗಾಗಲೇ ಮುಂಬೈಗೆ ತಲುಪಿದ್ದಾರೆ. ಶನಿವಾರ ಮುಂಬೈನಲ್ಲಿ ಡೆಪ್ಯೂಟಿ ಸ್ಪೀಕರ್ ಅನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಶಿವಸೇನೆಯಿಂದ ಅನರ್ಹಗೊಳಿಸುವ ಮೂಲಕ ಬಂಡಾಯ ಶಾಸಕರನ್ನು “ಹೆದರಿಸಲು ಸಾಧ್ಯವಿಲ್ಲ” ಎಂದು ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕರಿಗೆ ತಿಳಿಸಿದ್ದಾರೆ.
ವಿಶ್ವಾಸಮತ ಗೆಲ್ಲುವುದು ನಾವೇ ಎಂದ ಸಂಜಯ್ ರಾವತ್
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಏಕನಾಥ್ ಶಿಂಧೆಯು ಶಿವಸೇನೆಯ 40 ಶಾಸಕರು ಸೇರಿದಂತೆ ಒಟ್ಟು 50 ಶಾಸಕರ ಬೆಂಬಲವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, “ತಮ್ಮ ಬಣವೇ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದುಕೊಳ್ಳಲಿದೆ. ಪ್ರಸ್ತುತ ಶಾಸಕರು ತಪ್ಪು ಹೆಜ್ಜೆ ಇಡುತ್ತಿದ್ದು, ಅವರು ಮುಂಬೈಗೆ ಆಗಮಿಸುವುದಕ್ಕೆ ಇನ್ನೊಂದು ಅವಕಾಶ ನೀಡಲಾಗಿತ್ತು. ಆದರೆ ಈಗ ನಾವೇ ಅವರಿಗೆ ಸವಾಲು ಹಾಕುತ್ತಿದ್ದೇವೆ” ಎಂದರು.
ತಪ್ಪು ನನ್ನದೇ ಎಂದ ಸಿಎಂ ಉದ್ಧವ್ ಠಾಕ್ರೆ
“ನನ್ನ ಮಗನಿಗಾಗಿ ನಾನು ಏನು ಮಾಡಿದರೂ ನನ್ನ ಮೇಲೆ ಆರೋಪವಿದೆ, ಆದರೆ ಏಕನಾಥ್ ಶಿಂಧೆ ಮಗ ಎರಡು ಬಾರಿ ಶಿವಸೇನೆಯ ಸಂಸದರಾಗಿಲ್ಲವೇ, ಈಗ ಪಕ್ಷ ತೊರೆದು ಹೋಗುವವರೆಲ್ಲ ಹೋಗಬಹುದು, ನಾನು ಮತ್ತೊಮ್ಮೆ ಶಿವಸೇನೆಯನ್ನು ಕಟ್ಟಿ ಬೆಳೆಸುತ್ತೇನೆ. ಶಿವಸೈನಿಕರು ನನ್ನೊಂದಿಗೆ ಇರುವಾಗ ನನಗೆ ಬೇರೇನೂ ಚಿಂತೆ ಇಲ್ಲ, ನೀವು ಬಾಳಾಸಾಹೇಬರ ಶಿವಸೈನಿಕರು, ನೀವೇ ನನ್ನ ಕೀರ್ತಿ,” ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸರ್ಕಾರದ ಪರವಾಗಿ ನಾವಿದ್ದೇವೆ ಎಂದ ಶರದ್ ಪವಾರ್
“ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮತ್ತು ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಕ್ಕೆ ನಮ್ಮ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. ವಿಧಾನಸಭೆಯಲ್ಲಿ ನಮ್ಮ ಮೈತ್ರಿಕೂಟವೇ ವಿಶ್ವಾಸಮತವನ್ನು ಗೆದ್ದುಕೊಳ್ಳಲಿದೆ” ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಗತ್ಯ ಸಂಖ್ಯೆಯ ಶಾಸಕರ ಬೆಂಬಲ ಪಡೆದ ಏಕನಾಥ್ ಶಿಂಧೆ
ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವ್ ಆಗಿ ವಿಧಾನಸಭೆಯಲ್ಲಿ ಪಕ್ಷವನ್ನು ವಿಭಜಿಸಲು ಬೇಕಾದ ನಿರ್ಣಾಯಕ ಸಂಖ್ಯೆಯನ್ನು ಏಕನಾಥ್ ಶಿಂಧೆ ಗಳಿಸಿದ್ದಾರೆ. ಶಿವಸೇನೆ 55 ಶಾಸಕರಲ್ಲಿ 37 ಶಾಸಕರ ಬೆಂಬಲವನ್ನು ಪಡೆದುಕೊಂಡರೆ ಯಾವುದೇ ಅನರ್ಹತೆಯಿಲ್ಲದೇ ಪಕ್ಷವನ್ನು ವಿಭಜನೆ ಮಾಡಬಹುದು. ಈ ಲೆಕ್ಕಾಚಾರದಲ್ಲಿ ಶಿಂಧೆ 42 ಶಾಸಕರ ಬೆಂಬಲವನ್ನು ಪಡೆದುಕೊಂಡಿದ್ದು ಆಗಿದೆ. ಇದರ ಜೊತೆಗೆೆ ಮತ್ತಿಬ್ಬರು ಶಾಸಕರಾದ ದಾದಾ ಭೂಸೆ ಮತ್ತು ಸಂಜಯ್ ರಾಥೋಡ್ ಮತ್ತು ಒಬ್ಬ ಎಂಎಲ್‌ಸಿ ರವೀಬ್ದ್ರ ಫಠಕ್ ಕೂಡ ಶಿಂಧೆ ಬಣಕ್ಕೆ ಸೇರಿಕೊಳ್ಳಲು ಗುವಾಹಟಿ ಕಡೆಗೆ ಮುಖ ಮಾಡಿದ್ದಾರೆ.
ವಿಶ್ವಾಸ ಗೆಲ್ಲುವ ಲೆಕ್ಕಾಚಾರದಲ್ಲಿ ಮಹಾ ಪಕ್ಷಗಳು
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ. ಈಗ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಶಿವಸೇನೆ ನಾಯಕ ಏಕನಾಥ್ ಶಿಂಧೆ ಜೊತೆಗೆ 42 ಮಂದಿ ಶಾಸಕರು ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಶಿವಸೇನೆಗೆ ಬೆಂಬಲಿಸುವ ಶಾಸಕರ ಸಂಖ್ಯೆ 13ಕ್ಕೆ ತಗ್ಗಿರುವ ಬಗ್ಗೆ ವರದಿಯಾಗಿದೆ.