ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ಯಾರೇ ಆದರೂ ಕ್ರಮ ಕೈಗೊಳ್ಳಿ ಅಂದ್ರು ಆರೋಗ್ಯ ಸಚಿವರು

ಬೆಳಗಾವಿ: ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದ 7 ಭ್ರೂಣಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯನ್ನು ಸೀಜ್ ಮಾಡಿರುವ ಆರೋಗ್ಯಾಧಿಕಾರಿಗಳು, ತಮ್ಮದೇ ಆಸ್ಪತ್ರೆ ಭ್ರೂಣಗಳೆಂದು ತಪ್ಪೊಪ್ಪಿಕೊಂಡಿದ್ದಾರೆ.
ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿರುವ ಅಧಿಕಾರಿಗಳು, ತನಿಖೆಯನ್ನು ನಡೆಸಿದ್ದಾರೆ.
ಮೂರು ವರ್ಷಗಳಿಂದ ಅಬಾಷನ್ ಮಾಡಿದ್ದ ಏಳು ಭ್ರೂಣಗಳು ಇವಾಗಿದ್ದು, ಪೊಲೀಸರ ದಾಳಿ ಭೀತಿಯಿಂದ ರಾತ್ರೋರಾತ್ರಿ ಏಳು ಭ್ರೂಣಗಳನ್ನು ಹಳ್ಳಕ್ಕೆ ಎಸೆದಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಜೂನ್. 23ರ ರಾತ್ರಿ ಐದು ಬಾಟಲ್‌ಗಳಲ್ಲಿ ಏಳು ಭ್ರೂಣ ಹಳ್ಳಕ್ಕೆ ಎಸೆದಿದ್ದ ಸಿಬ್ಬಂದಿ ಎಡವಟ್ಟು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಸದ್ಯ ಆಸ್ಪತ್ರೆ ಸೀಜ್ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ನಿಯಮ ಗಾಳಿಗೆ ತೂರಿ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಲಿಂಗ ಪತ್ತೆ ಹಚ್ಚುತ್ತಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಗ್ಯ ಸಚಿವರಿಂದ ಆದೇಶ: ಮೂಡಲಗಿ ಪಟ್ಟಣದಲ್ಲಿ ಪತ್ತೆಯಾದ ಮೃತ ಏಳು ಭ್ರೂಣಗಳ ಎಸೆದಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಆದೇಶಿಸಿದ್ದಾರೆ.ಬೆಳಗಾವಿ ಡಿಎಚ್‌ಒ ಡಾ. ಮಹೇಶ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡ ಸಚಿವರು, ಘಟನೆ ಹೇಗೆ ನಡೆಯಿತು? ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕುರಿತು ಚರ್ಚಿಸಿದ್ದಾರೆ.ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಯಾರದ್ದೇ ಒತ್ತಡ ಬಂದ್ರೂ ತಲೆಕೆಡಸಿಕೊಳ್ಳದೇ ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೆ ಸೂಚಿಸಿದ್ದಾರೆ.