ಬೆಳಗಾವಿಯಲ್ಲಿ 7 ಭ್ರೂಣಗಳು ಪತ್ತೆ, ಚರಂಡಿಗೆ ಎಸೆದಿದ್ದ ಆಸ್ಪತ್ರೆ ಸೀಜ್

ಬೆಳಗಾವಿ, ಜೂನ್ 25: ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ 7 ಭ್ರೂಣಗಳ ಮೃತದೇಹಗಳು ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನ ಕೃತ್ಯದ ಬಗ್ಗೆ ಮಾಹಿತಿ ಪಡೆದಿರುವ ಆರೋಗ್ಯ ಸಚಿವ ಡಾ. ಸುಧಾಕರ್ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಮತ್ತು ಒತ್ತಡಕ್ಕೆ ಮಣಿಯದೇ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
.
ಡಬ್ಬದಲ್ಲಿ ಹಾಕಿ ಹಳ್ಳದಲ್ಲಿ ಭ್ರೂಣಗಳ ಶವ ನೋಡಿ ಜನ ಬೆಚ್ಚಿಬಿದ್ದಿದ್ದರು. 5 ಡಬ್ಬಗಳಲ್ಲಿ ಏಳು ಬ್ರೂಣಗಳನ್ನು ಎಸೆಯಲಾಗಿದೆ. ಮೂಡಲಗಿ ಬಸ್ ನಿಲ್ದಾಣದ ಬಳಿಯ ಹಳ್ಳದಲ್ಲಿ ಡಬ್ಬದಲ್ಲಿ ಹಾಕಿ 7 ಭ್ರೂಣಗಳನ್ನು ತೇಲಿಬಿಡಲಾಗಿತ್ತು. ಭ್ರೂಣಗಳ ಮೃತ ದೇಹಗಳನ್ನು ನೋಡಿ ಜನರು ಹೌಹಾರಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಮೂಡಲಗಿ ಪೊಲೀಸರು ಹಾಗೂ ಡಿಎಚ್‌ಒ ಕೂಡ ಭೇಟಿ ನೀಡಿ ಪರಿಶಿಲೀಸಿದ್ದರು. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಎಂದು ತಿಳಿದುಬಂದಿದೆ.
ಗ್ರಾಮ ಪಂಚಾಯಿತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ, ಎಲ್ಲವೂ 5 ತಿಂಗಳ ಭ್ರೂಣಗಳಾಗಿವೆ. ಹಳ್ಳದಲ್ಲಿ ಸಿಕ್ಕಿರುವ ಭ್ರೂಣಗಳನ್ನು ಶವಗಾರದಲ್ಲಿ ಇರಿಸಲಾಗಿದ್ದು, ಪ್ರಕರಣ ದಾಖಲಾದ ಬಳಿಕ ಅವುಗಳನ್ನು ವಿದಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು ಎಂದು ಡಿಎಚ್‌ಒ ತಿಳಿಸಿದ್ದರು. ಅಲ್ಲದೆ ಡಿಎಚ್‌ಒ ಮಹೇಶ್ ಕೋಣಿ, ಮೂಡಲಗಿ ಪೊಲೀಸರು ನೇತೃತ್ವದಲ್ಲಿ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ್ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ವೆಂಕಟೇಶ್ವರ್ ಮೆಟರ್ನಿಟಿ ಆಸ್ಪತ್ರೆ ಸೀಜ್
ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ತಮ್ಮ ಆಸ್ಪತ್ರೆಯಿಂದಲೇ ಏಳು ಭ್ರೂಣಗಳನ್ನು ಹಳ್ಳಕ್ಕೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ರಕ್ಷಿಸಿ ಬಾಟಲ್ನಲ್ಲಿ ಇಡಲಾಗಿತ್ತು. ನಾಲ್ಕು ದಿನಗಳ ಹಿಂದೆ ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಸಿಬ್ಬಂದಿಗೆ ಭ್ರೂಣಗಳನ್ನು ಎಸೆಯಲು ಕೊಡಲಾಗಿತ್ತು. ಆ ಸಿಬ್ಬಂದಿ ಅವುಗಳನ್ನು ತೆಗೆದುಕೊಂಡು ಹೋಗಿ ಜೂ.23ರಂದು ಹಳ್ಳದಲ್ಲಿ ಎಸೆದಿದ್ದರು ಎಂದು ವೈದ್ಯೆ ತಿಳಿಸಿದ್ದಾರೆ.
3 ವರ್ಷಗಳ ಹಿಂದೆ ಅಬಾರ್ಷನ್ ಮಾಡಿದ ಭ್ರೂಣಗಳು
ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾದ ನಂತರ ನಿನ್ನೆ ಸಿಕ್ಕಿರುವ ಏಳು ಭ್ರೂಣಗಳು ಮೂರು ವರ್ಷಗಳ ಹಿಂದೆ ಅಬಾರ್ಷನ್ ಮಾಡಿದವು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಜೂನ್ 23ರಂದು ಏಳು ಭ್ರೂಣಗಳನ್ನು ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಬೀಸಾಡಿ ಬಂದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿರಬಹುದೇ ಎಂಬ ಅನುಮಾನ ಹೆಚ್ಚಾಗುತ್ತಿದೆ. ಲಿಂಗಪತ್ತೆ , ಭ್ರೂಣ ಹತ್ಯೆಗೆ ನಿಷೇಧವಿದ್ದರೂ ಹಣದಾಸೆಗೆ ಈ ದುಷ್ಕೃತ್ಯವನ್ನು ನಡೆಸಲಾಗುತ್ತಿರಬಹುದು ಎನ್ನುವ ಅನುಮಾನ ಮೂಡಲಾರಂಭಿಸಿದೆ.
ಮುಲಾಜಿಲ್ಲದೆ ಕ್ರಮಕ್ಕೆ ಸಚಿವ ಸುಧಾಕರ್ ಸೂಚನೆ
ಮೂಡಲಗಿಯ ಹಳ್ಳದಲ್ಲಿ ಭ್ರೂಣಗಳು ಪತ್ತೆ ಪ್ರಕರಣ ರಾಜ್ಯದ್ಯಾಂತ ಸದ್ದು ಮಾಡಿದ ನಂತರ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿ ಮಹೇಶ್ ಕೋಣಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಯಾರ ಒತ್ತಡಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ನೂರಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ
ಘಟನೆ ಬಗ್ಗೆ ಸ್ವತಃ ಆರೋಗ್ಯ ಸಚಿವರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದ ಬೆನ್ನಲ್ಲೇ ಬೆಳಗಾವಿ ಟಿಎಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು ತಾಲೂಕಿನಾದ್ಯಂತ ನೂರಕ್ಕೂ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಸೆಂಟರ್‌ಗಳು ಲೈಸೆನ್ಸ್ ಪಡೆದಿವೆಯೇ, ಇಲ್ಲವೋ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಗರ್ಭಿಣಿಯರ ಮಾಹಿತಿ ಇರುವ ದಾಖಲೆಗಳ ಪರಿಶೀಲನೆಗೂ ಮುಂದಾಗಿದ್ದಾರೆ. ಜೊತೆಗೆ ಭ್ರೂಣ ಪತ್ರ ಅಪರಾಧ ಕೃತ್ಯ ಎಂದು ಎಂಬ ಭಿತ್ತಿಗಳನ್ನು ಕೂಡ ಅಂಟಿಸಲಾಗುತ್ತಿದೆ ಎಂದು ತಿಳಿದುಬಂದಿದೆ.