ಭಾರತದ ಹಲವೆಡೆ ಭಾರಿ ಮಳೆ ಸಾಧ್ಯತೆ: ಕರ್ನಾಟಕ ಕರಾವಳಿಗೆ 4 ದಿನ ಆರೆಂಜ್ ಅಲರ್ಟ್

ಬೆಂಗಳೂರು, ಜೂನ್ 26: ಮುಂದಿನ ಕೆಲವು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಐದು ದಿನಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆಯಿದೆ. ಜೂನ್ 27 ರಿಂದ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪದಲ್ಲಿ ಗುಡುಗು ಅಥವಾ ಮಿಂಚು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ, ತನ್ನ ಹವಾಮಾನ ಬುಲೆಟಿನ್‌ನಲ್ಲಿ, “ಕರ್ನಾಟಕ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ವ್ಯಾಪಕ ಮಳೆಯಾಗುತ್ತದೆ; ಮುಂದಿನ 5 ದಿನಗಳಲ್ಲಿ ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಯಾನಂ ಮತ್ತು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಚದುರಿದ ಮಳೆ ಬೀಳಲಿದೆ.” ಎಂದು ತಿಳಿಸಿದೆ.
ಮುಂದಿನ 5 ದಿನಗಳಲ್ಲಿ ಕೊಂಕಣ ಮತ್ತು ಗೋವಾ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆ ಮತ್ತು ಸೌರಾಷ್ಟ್ರದ ದಕ್ಷಿಣ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ; ಮಧ್ಯ ಮಹಾರಾಷ್ಟ್ರ, ಕರ್ನಾಟಕ ಒಳಭಾಗ ಮತ್ತು ದಕ್ಷಿಣ ಗುಜರಾತ್ ಪ್ರದೇಶದ ಘಾಟ್ ಪ್ರದೇಶಗಳು ಜೂನ್ 25, 26 ,29ರಂದು ಭಾರಿ ಮಳೆಯಾಗಲಿದೆ. ಜೂನ್ 29 ರವರೆಗೆ ಕೊಂಕಣ, ಗೋವಾ ಮತ್ತು ಕರಾವಳಿ ಕರ್ನಾಟಕದಲ್ಲಿ ಪ್ರತ್ಯೇಕವಾದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಕರ್ನಾಟಕ ಕರವಾಳಿ ಭಾಗದಲ್ಲಿ ಆರೆಂಜ್ ಅಲರ್ಟ್
ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಆಗಲಿದೆ ಎಂದಿರುವ ಹವಾಮಾನ ಇಲಾಖೆ ಕರಾವಳಿ ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದಲ್ಲಿ ಗುಡುಗು- ಮುಂಚು ಸಹಿತ 115 ಮಿಮಿ ನಿಂದ 204 ಮಿ.ಮೀ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 28, 29 ರಂದು ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ರಾಜ್ಯದ ಕರಾವಳಿಯಲ್ಲಿ ಅಲೆಗಳ ರಭಸ ಹೆಚ್ಚಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ.
ಕರಾವಳಿ ಜಿಲ್ಲೆಗಳ ಕೆಲವೆಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ, ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿಗೆ ಮುಂದಿನ 4 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಶಾನ್ಯ ಭಾರತದಲ್ಲೂ ಭಾರಿ ಮಳೆ ನಿರೀಕ್ಷೆ
ಈಶಾನ್ಯ ಭಾರತ ಮತ್ತು ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮುಂಬರುವ ಕೆಲವು ದಿನಗಳಲ್ಲಿ ಪ್ರತ್ಯೇಕವಾದ ಭಾರಿ ಮಳೆ ಮತ್ತು ಗುಡುಗು ಅಥವಾ ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಗುಡುಗು ಅಥವಾ ಮಿಂಚು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
ಉತ್ತರಾಖಂಡ್ ಭಾಗಗಳಲ್ಲಿ ವ್ಯಾಪಕ ಮಳೆ
ಉತ್ತರಾಖಂಡ್ ಮತ್ತು ಪೂರ್ವ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಜೂನ್ 29 ರವರೆಗೆ ಪ್ರತ್ಯೇಕವಾದ ಗುಡುಗು ಮತ್ತು ಮಿಂಚುಗಳೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಛತ್ತೀಸ್‌ಗಢ, ವಿದರ್ಭ ಮತ್ತು ಮಧ್ಯಪ್ರದೇಶದಲ್ಲಿ ಸಹ ಸಾಕಷ್ಟು ವ್ಯಾಪಕವಾದ ಮಳೆಯಾಗಲಿದೆ.
ದೆಹಲಿಯಲ್ಲಿ ಮಂಗಳವಾರದಿಂದ ಮಳೆ ಸಾಧ್ಯತೆ
ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲು ಕಡಿಮೆಯಾಗಿಲ್ಲ. ದೆಹಲಿಯ ಸಫ್ದರ್‌ಜಂಗ್‌ನಲ್ಲಿ ಶನಿವಾರ ಗರಿಷ್ಠ ತಾಪಮಾನವು 40.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಹೆಚ್ಚಾಗಿದೆ. ಒಂದು ದಿನದ ಹಿಂದೆ, ಇದು 39.3 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಮಂಗಳವಾರದಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.
ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಸೋಮವಾರದಿಂದ ದಿನದ ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಹೇಳಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಭಾನುವಾರದಂದು ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಗಿರಬಹುದು, ಆದರೆ ಸೋಮವಾರದ ಬೆಳವಣಿಗೆಯಿಂದಾಗಿ ಇದು 38 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ.