ಲಾರಿ – ಕಾರು ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು, ಓರ್ವ ಗಂಭೀರ

ಮಂಡ್ಯ: ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಢಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ಪಟ್ಟಣದ ಹೊರವಲಯ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಎಂ.ಹೊಸೂರು ಗೇಟ್ ಸಮೀಪ ಶನಿವಾರ ರಾತ್ರಿ 8;30 ರಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಬಿರೇಶ್ವರಪುರದ ದೇವರಾಜು, ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದ ಮಂಜುನಾಥ್ ಹಾಗೂ ವಿಳಾಸ ಪತ್ತೆಯಾಗದ ಮತ್ತೊಬ್ಬ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದ ಸ್ವಾಮಿ ಎಂಬಾತನೇ ತೀವ್ರ ಗಾಯಗೊಂಡಿರುವ ಗಾಯಾಳಾಗಿದ್ದಾನೆ. ಪಾಂಡವಪುರ ತಾಲೂಕಿನ ಕೆನ್ನಾಳು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೇವರಾಜು ಹಾಗೂ ಕನಗನಮರಡಿ ವೃತ್ತದ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಸೇರಿದಂತೆ ಮತ್ತೊಬ್ಬ ರೈತ ಸಾವನ್ನಪ್ಪಿದ್ದಾರೆ.
ಗಾಯಾಳು ಸ್ವಾಮಿ ಪಾಂಡವಪುರ ತಾಲೂಕಿನ ದಾಮರಹಳ್ಳಿ ವೃತ್ತದ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮೃತ ದೇವರಾಜು ತಮ್ಮ ಜಮೀನಿನ ಕೆಲಸಕ್ಕಾಗಿ ಇಬ್ಬರು ಗ್ರಾಮ ಸಹಾಯಕರು ಹಾಗೂ ಒಬ್ಬ ರೈತ ಕಾರ್ಮಿಕನನ್ನು ಕರೆತಂದು ಪಾಂಡವಪುರಕ್ಕೆ ವಾಪಸ್ಸಾಗುವಾಗ ಈ ದುರ್ಘಟನೆ ನಡೆದಿದೆ.
ಮೈಸೂರು ಕಡೆಯಿಂದ ಬೆಳಗಾಂ ಕಡೆಗೆ ಸಂಚರಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ಥಳದಲ್ಲೇ ಮೃತಪಟ್ಟ ಮೂವರ ಶವಗಳನ್ನು ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಸ್ವಾಮಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಾಗಮಂಗಲ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.