Yadagiri: ಬಸ್ ನಿಲ್ದಾಣದಲ್ಲಿ ಆರು ತಿಂಗಳ ಹೆಣ್ಣು ಮಗು ಪತ್ತೆ

ಮಗುವನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಹಲವು ಅನುಮಾನಗಳು
ತಾಯಿಯನ್ನು ಸೇರಲು ಮಗು ಹಂಬಲಿಸುತ್ತಿದ್ದು, ಮಗುವಿನ ಗೋಳಾಟದ ದೃಶ್ಯ ಮನ ಕಲುಕುವಂತಿತ್ತು. ಮಗುವನ್ನು ತಾಯಿಯೇ ಬಿಟ್ಟು ಹೋಗಿರಬಹುದು ಅಥವಾ ಯಾರೋ ದುಷ್ಕರ್ಮಿಗಳು ಮಗುವನ್ನು ಕಳ್ಳತನ ಮಾಡಿಕೊಂಡು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಶಹಾಪುರ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಹೆಣ್ಣು ಮಗುವಿನ ಬಗ್ಗೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಹೆತ್ತವರು ಹೆಣ್ಣು ಮಗುವೆಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದರಾ? ಹೆತ್ತ ತಾಯಿಯಿಂದ ಮಗು ಅದು ಹೇಗೆ ಮಿಸ್ ಆಗಿದೆ? ಮಗು ಯಾರಾದರೂ ಕಳ್ಳತನ ಮಾಡಿ ತಂದು ಬಿಟ್ಟು ಹೋದರಾ ಅಥವಾ ಯಾವ ಉದ್ದೇಶಕ್ಕೆ ಮಗು ಬಿಟ್ಟು ಹೋಗಿದ್ದಾರೆ ಎಂಬ ಹಲವಾರು ಪ್ರಶ್ನೆಗೆ ಎಡೆ ಮಾಡಿಕೊಟ್ಟಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ
ಈ ಬಗ್ಗೆ ವಿಶೇಷ ದತ್ತು ಕೇಂದ್ರದ ಸಂಯೋಜಕಿ ಭಾಗ್ಯಶ್ರೀ ಪಾಟೀಲ್ ಅವರು ಮಾತನಾಡಿ, ನಮಗೆ ಶಹಾಪುರ ಬಸ್ ನಿಲ್ದಾಣದಲ್ಲಿ ಹೆಣ್ಣು ಮಗು ಅಳುತ್ತಿದೆ ಎಂದು ಮೇಲಾಧಿಕಾರಿಗಳು ಗಮನಕ್ಕೆ ತಂದರು. ನಂತರ ಮೇಲಾಧಿಕಾರಿಗಳ ಸೂಚನೆಯಂತೆ ಮಗುವನ್ನು ರಕ್ಷಣೆ ಮಾಡಲಾಗಿದೆ.
ಶಹಾಪುರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮವಹಿಸಲಾಗುತ್ತದೆ.ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.
ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾ
ಇನ್ನು ಈ ಸಂಬಂದ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗುವಿನ ತಾಯಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಇತ್ತ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಸಹ ಕಾರ್ಯನಿರ್ವಹಿಸದೆ ಇದ್ದಿದ್ದು ಪೊಲೀಸರಿಗೆ ಮಗುವಿನ ತಾಯಿಯ ಪತ್ತೆ ತಲೆಬಿಸಿಯಾಗಿ ಪರಿಣಮಿಸಿದೆ.
ಪತ್ತೆ ಹಚ್ಚಿ ಕ್ರಮಕೈಗೊಳ್ಳಿ
ಯಾವ ಉದ್ದೇಶಕ್ಕಾಗಿ ಹೆಣ್ಣು ಮಗು ಬಿಟ್ಟು ಹೋಗಿದ್ದಾರೆ? ಯಾರು ತಪ್ಪಿತಸ್ಥರೆಂಬುದು ಪೊಲೀಸರು ಪತ್ತೆ ಹಚ್ಚಿ ಮತ್ತೆ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.