ಬಾಟಲ್‌ಗಳಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದು, ಜನರಲ್ಲಿ ಭಾರಿ ಆತಂಕ ಪತ್ತೆಯಾಗ್ತಿವೆ ಭ್ರೂಣಗಳ ಚರಿತ್ರೆ- ಬೆಳಗಾವಿಯ ಆಸ್ಪತ್ರೆಗಳ ಭಯಾನಕ ಕಥೆಗಳು ಬೆಳಕಿಗೆ..!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಜೂನ್. 23ರ ರಾತ್ರಿ ಐದು ಬಾಟಲ್‌ಗಳಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದು, ಜನರಲ್ಲಿ ಭಾರಿ ಆತಂಕ ಮೂಡಿಸಿದ್ದವು. ಕೊನೆಗೆ ತನಿಖೆ ಕೈಗೊಂಡಿದ್ದ ಅಧಿಕಾರಿಗಳಿಗೆ ಇವು ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ಗಳ ಕೃತ್ಯ ಎನ್ನುವುದು ತಿಳಿದಿತ್ತು.
ಮೂರು ವರ್ಷಗಳಿಂದ ಅಬಾಷನ್ ಮಾಡಿದ್ದ ಏಳು ಭ್ರೂಣಗಳು ಇವಾಗಿದ್ದು, ಪೊಲೀಸರ ದಾಳಿ ಭೀತಿಯಿಂದ ರಾತ್ರೋರಾತ್ರಿ ಏಳು ಭ್ರೂಣಗಳನ್ನು ಹಳ್ಳಕ್ಕೆ ಎಸೆದಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದರು ಸಿಬ್ಬಂದಿ.
ಇದರ ಬೆನ್ನಲ್ಲೇ ಇದೀಗ ಕೆಲವು ಸ್ಕ್ಯಾನಿಂಗ್ ಸೆಂಟರ್ಗಳ ಹಿಂದೆ ಬಿದ್ದಿದ್ದಾರೆ ತನಿಖಾಧಿಕಾರಿಗಳು. ಅಗೆದಷ್ಟೂ, ಬಗೆದಷ್ಟೂ ಭ್ರೂಣಗಳ ಭಯಾನಕ ಕಥೆಗಳು ಒಂದೊಂದಾಗಿ ಹೊರಬರುತ್ತಿವೆ. ಅನುಮತಿ ಇಲ್ಲದೆಯೇ ಆಸ್ಪತ್ರೆಗಳನ್ನು ನಡೆಸಲಾಗುತ್ತಿದ್ದು, ಯಾವುದೇ ಅನುಮತಿ ಪಡೆದುಕೊಳ್ಳದೇ ಭ್ರೂಣ ಸಂಗ್ರಹಿಸಿ ಇಡಲಾಗುತ್ತಿದೆ.
ಬೆಳಗಾವಿ ಡಿಎಚ್‌ಒ ಕಾರ್ಯಾಚರಣೆ ವೇಳೆ ಈ ಅಂಶ ಬಹಿರಂಗಗೊಂಡಿದೆ. ಪರ್ಮಿಷನ್ ಇಲ್ಲದೇ ವೈದ್ಯರು ಆಸ್ಪತ್ರೆಗಳನ್ನು ನಡೆಸುತ್ತಿರುವುದು ತಿಳಿದುಬಂದಿದೆ. ಈ ಸಂಬಂಧ ಮೂಡಲಗಿಯ ನವಜೀವನ ಆಸ್ಪತ್ರೆ ಸೀಜ್ ಮಾಡಲಾಗಿದೆ ಎಂದು ಡಿಹೆಚ್‌ಒ ಮಹೇಶ್ ಕೋಣಿ ಮಾಹಿತಿ ನೀಡಿದ್ದಾರೆ.
ಈ ಆಸ್ಪತ್ರೆ ಕಳೆದ ಮೂರು ವರ್ಷಗಳಿಂದ ಯಾವುದೇ ಪರವಾನಗಿ ಹೊಂದಿರಲಿಲ್ಲ. ಇದೇ ರೀತಿ ಜಿಲ್ಲೆಯ 303 ಸ್ಯ್ಕಾನಿಂಗ್ ಸೆಂಟರ್ ಮೇಲೆ ಅಧಿಕಾರಿಗಳು ಟಾರ್ಗೆಟ್ ಮಾಡಿದ್ದಾರೆ. ಈವರೆಗೂ 185 ಸ್ಕ್ಯಾನಿಂಗ್ ಸೆಂಟರ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಒಂದು ಎರಡು ಆಸ್ಪತ್ರೆ ಸೀಜ್ ಮಾಡಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಮುಂದಿನ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈಗಾಗಲೇ ಮೂಡಲಗಿ ಪಟ್ಟಣದ ವೆಂಕಟೇಶ್ವರ ಹಾಗೂ ನವಜೀವನ ಆಸ್ಪತ್ರೆ ಆರೋಗ್ಯ ಇಲಾಖೆ ಮುಚ್ಚಿಸಿದೆ. ಮೃತ ಭ್ರೂಣಲಿಂಗಗಳನ್ನು ಹಳ್ಳಕ್ಕೆ ಎಸೆದದ್ದು ತಾನೇ ಎಂದು ಈ ಆಸ್ಪತ್ರೆ ಒಪ್ಪಿಕೊಂಡಿದ್ದರಿಂದ ಸೀಜ್ ಮಾಡಲಾಗಿದೆ.
ಇದಾಗಲೇ ಏಳು ಭ್ರೂಣಗಳ ಎಸೆದಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಆದೇಶಿಸಿದ್ದಾರೆ. ಬೆಳಗಾವಿ ಡಿಎಚ್‌ಒ ಡಾ. ಮಹೇಶ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡ ಸಚಿವರು, ಘಟನೆ ಹೇಗೆ ನಡೆಯಿತು? ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕುರಿತು ಚರ್ಚಿಸಿದ್ದಾರೆ.ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಯಾರದ್ದೇ ಒತ್ತಡ ಬಂದ್ರೂ ತಲೆಕೆಡಸಿಕೊಳ್ಳದೇ ಕ್ರಮ ಕೈಗೊಳ್ಳುವಂತೆ ಡಿಎಚ್‌ಒಗೆ ಸೂಚಿಸಿದ್ದಾರೆ.