ಕುಮಟಾ ಬೀಚ್‌ನಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸಾವು

ಕಾರವಾರ, ಜೂ26: ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾಗಿ ಅದರಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಕುಮಟಾದ ಕಾಗಲ್ ಕಡಲತೀರದ ಬಳಿ ನಡೆದಿದೆ.
ಬೆಂಗಳೂರು ಮೂಲದ ಅರ್ಜುನ್, ಚೈತ್ರಶ್ರೀ ಮೃತದೇಹ ಪತ್ತೆಯಾಗಿದ್ದು ತೇಜಸ್, ಕಿರಣ್ ಕುಮಾರ್ ಎಂಬ ಇಬ್ಬರು ವಿದ್ಯಾರ್ಥಿಗಳು ಕಣ್ಮರೆಯಾಗಿದ್ದಾರೆ.
ಈ ಇಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಬೆಂಗಳೂರಿನಿಂದ 87 ವಿದ್ಯಾರ್ಥಿಗಳು ಕುಮಟಾಗೆ ಪ್ರವಾಸಕ್ಕೆ ಬಂದಿದ್ದರು. ಕುಮಟಾದ ಸಿಲ್ವರ್ ಸ್ಯಾಂಡ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದ ಎಲ್ಲರೂ ಅಲೆಯನ್ನು ಲೆಕ್ಕಿಸದೆ ಸಮುದ್ರದಲ್ಲಿ ಈಜಾಡಲು ಮುಂದಾಗಿದ್ದರು.
ಅಲೆಯ ರಭಸಕ್ಕೆ ಸಿಲುಕಿದ್ದ ನಾಲ್ವರು ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವಿದ್ಯಾರ್ಥಿಗಳಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.
ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವ ಪ್ರವಾಸಿಗರು
ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾದ ಬೆನ್ನಲ್ಲೇ ಕರಾವಳಿ ಕಡಲತೀರಗಳಲ್ಲಿ ಅಲೆಗಳ ಆರ್ಭಟ ಕೂಡ ಹೆಚ್ಚಾಗಿದೆ. ಆದರೆ ಈ ವೇಳೆ ಕಡಲತೀರಗಳತ್ತ ಆಕರ್ಷಿತರಾಗುತ್ತಿರುವ ಪ್ರವಾಸಿಗರು ಅಲೆಗಳ ಆರ್ಭಟ ಅರಿಯದೇ ಸೂಚನೆಗಳನ್ನು ಲೆಕ್ಕಿಸದೆ ಕಡಲಿಗಿಳಿದು ಮೋಜು ಮಸ್ತಿಯಲ್ಲಿ ತೊಡುಗುತ್ತಿದ್ದು, ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ.
ಪ್ರಕೃತಿ ಮಡಿಲನ್ನು ಹೊದ್ದುಕೊಂಡು ಮಳೆಗಾಲದ ವೇಳೆ ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯತ್ತ ಪ್ರತಿ ವರ್ಷವೂ ಈ ವೇಳೆ ಪ್ರವಾಸಿಗರ ದಂಡೆ ಹರಿದುಬರುತ್ತದೆ. ಅದರಲ್ಲಿಯೂ ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತಗಳು ಹಾಗೂ ಕಡಲತೀರಗಳತ್ತ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಸದ್ಯ ಜಿಲ್ಲೆಯಲ್ಲಿ ಮುಂಗಾರು ಜೋರಾದ ಹಿನ್ನೆಲೆಯಲ್ಲಿ ಜಲಪಾತಗಳು ತುಂಬಿಕೊಂಡಿದ್ದು, ಕಡಲತೀರಗಳು ರೌದ್ರಾವತಾರ ತಾಳಿವೆ. ಈ ನಡುವೆ ಪ್ರವಾಸಿಗರು ಕೂಡ ಜಿಲ್ಲೆಯತ್ತ ಹರಿದುಬರುತ್ತಿದ್ದಾರೆ.
ಕೆಂಪು ಬಾವುಟಗಳನ್ನು ನೆಟ್ಟು ಅಪಾಯದ ಎಚ್ಚರಿಕೆ
ಹೀಗೆ ಕಳೆದ 15 ದಿನಗಳ ಅವಧಿಯಲ್ಲಿ ಮುರುಡೇಶ್ವರ, ಗೋಕರ್ಣ, ಕುಮಟಾ ಕಡಲತೀರಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಶನಿವಾರ ಕುಮಟಾದ ಕಾಗಲ್‌ಗೆ ಬೆಂಗಳೂರಿನಿಂದ ಪ್ರವಾಸಕ್ಕೆ ಆಗಮಿಸಿದ್ದ ಒಟ್ಟು 87 ಪ್ರವಾಸಿಗರ ಪೈಕಿ ನೀರಿನಲ್ಲಿ ಮೈಮರೆತಾಗ ನಾಲ್ವರು ಕೊಚ್ಚಿಹೋಗಿದ್ದು, ಎರಡು ಶವ ಸಿಕ್ಕಿದೆ. ಇಬ್ಬರ ಮೃತದೇಹಕ್ಕಾಗಿ ಭಾನುವಾರವೂ ಹುಡುಕಾಟ ಮುಂದುವರಿಸಲಾಗಿದೆ.
“ಜಿಲ್ಲೆಯ ಕಡಲತೀರಗಳಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆ. ಇನ್ನು ಕೆಲವೆಡೆ ಕೆಂಪು ಬಾವುಟಗಳನ್ನು ನೆಟ್ಟು ಅಪಾಯದ ಎಚ್ಚರಿಕೆ ನೀಡಲಾಗಿದೆ. ಆದರೂ ದೂರದ ಪ್ರದೇಶದಿಂದ ಪ್ರವಾಸಕ್ಕೆಂದು ಬರುವವರು ಕಡಲತೀರದಲ್ಲಿ ಆದ ಬದಲಾವಣೆ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನೇರವಾಗಿ ಅಲೆಗಳ ಅಬ್ಬರ ಇರುವ ಪ್ರದೇಶಗಳಲ್ಲಿ ನೀರಿಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ” ಎಂದು ಕಾಗಲ್ ನ ಪ್ರಶಾಂತ ನಾಯ್ಕ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಕೊರತೆ
ಉತ್ತರ ಕರ್ನಾಟಕ ಭಾಗ ಸೇರಿದಂತೆ ಬೆಂಗಳೂರು, ಮೈಸೂರು ಹೀಗೆ ನಾನಾ ಭಾಗಗಳಿಂದ ಬಂದಂತಹ ಪ್ರವಾಸಿಗರು ಕಡಲತೀರದ ಆಳ-ಅಗಲ ಅಲ್ಲಿನ ಸೂಚನಾ ಫಲಕಗಳನ್ನು ಗಮನಿಸದೇ ನೀರಿಗೆ ಇಳಿಯುತ್ತಿದ್ದಾರೆ. ಅಲ್ಲದೆ ಸಮುದ್ರದ ಅಲೆಗಳ ಬಗ್ಗೆ ಸ್ವಲ್ಪವೂ ಅರಿವಿಲ್ಲದೆ ಮೋಜು ಮಸ್ತಿಯಲ್ಲಿ ತೊಡಗುವ ಪ್ರವಾಸಿಗರು ಅಪಾಯವನ್ನು ತಂದೊಡ್ಡಿಕೊಳ್ಳುತ್ತಿದ್ದಾರೆ.
ಇನ್ನು ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹಿಂದೆ ಲೈಫ್ ಗಾರ್ಡ್‌ಗಳ ನೇಮಕ ಮಾಡಲಾಗುತಿತ್ತು. ಆದರೆ ಇದೀಗ ಸರಿಯಾದ ವೇತನ ಸಿಗದ ಕಾರಣಕ್ಕೆ ಕೆಲ ಲೈಫ್ ಗಾರ್ಡ್ ಗಳು ಕೆಲಸ ತೊರೆದಿದ್ದಾರೆ. ಇದರಿಂದ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಪೊಲೀಸ್ ಸಿಬ್ಬಂದಿಗಳನ್ನು ಅಲ್ಲಲ್ಲಿ ರಜಾ ದಿನಗಳಲ್ಲಿ ನೇಮಕ ಮಾಡಲಾಗುತ್ತಿದೆಯಾದರೂ ಅವರ ಸಂಖ್ಯೆ ಸಹ ಕೊರತೆ ಇರುವುದರಿಂದ ಪ್ರವಾಸಿಗರಿಗೆ ಸೂಕ್ತ ಮಾಹಿತಿ ಸಿಗದೆ ಇಲ್ಲವೇ ಅಪಾಯಕ್ಕೆ ಸಿಕ್ಕ ಸಂದರ್ಭದಲ್ಲಿ ರಕ್ಷಣೆ ಸಾಧ್ಯವಾಗದೆ ಸಾವು ಹೆಚ್ಚಾಗುತ್ತಿದೆ.
ಪ್ರವಾಸಿಗರ ರಕ್ಷಣೆಗೆ ಇನ್ನಷ್ಟು ಕ್ರಮ: ಜಿಲ್ಲಾಧಿಕಾರಿ
“ಕಡಲ ತೀರದಲ್ಲಿ ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್ ಜೊತೆಗೆ ಪೊಲೀಸ್ ಹಾಗೂ ಹೋಮ್ ಗಾರ್ಡ್ಸ್ ಸಿಬ್ಬಂದಿ ನೇಮಿಸಲಾಗಿದೆ. ಆದರೆ ಮುರುಡೇಶ್ವರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಪ್ರವಾಸಿಗರು ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸದೆ ಕದ್ದು ಮುಚ್ಚಿ ಸಮುದ್ರಕ್ಕೆ ಇಳಿದು ಅಪಾಯ ತಂದುಕೊಳ್ಳುತ್ತಿದ್ದಾರೆ. ಯಾರೇ ಆದರೂ ಕೂಡ ಈ ಸಮಯದಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ನೀರಿಗೆ ಇಳಿಯಬಾರದು. ಪ್ರವಾಸಿಗರು ಕೂಡ ತಮ್ಮ ಜಾಗೃತಿಯನ್ನು ತಾವೇ ವಹಿಸಿಕೊಳ್ಳಬೇಕು. ಜಿಲ್ಲಾಡಳಿತದಿಂದಲೂ ಕೂಡ ಪ್ರವಾಸಿಗರ ರಕ್ಷಣೆಗೆ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು” ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಸದ್ಯ ಮಳೆಗಾಲ ಪ್ರಾರಂಭವಾಗಿದ್ದು ಇನ್ನು ಎರಡು ಮೂರು ತಿಂಗಳುಗಳ ಕಾಲ ಅಲೆಗಳ ಅಬ್ಬರ ಹೆಚ್ಚಾಗಿ ಇರಲಿದೆ. ಅಲ್ಲದೇ ಮಳೆ ಇದ್ದರೂ ಕಡಲ ತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಿರುವ ಕಾರಣ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸಾವನ್ನು ತಡೆಯುವ ನಿಟ್ಟಿನಲ್ಲಿ ಶೀಘ್ರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.