ಶಿವಸೇನೆ-ಬಿಜೆಪಿ ಮೈತ್ರಿ ಸುಳಿವು ಕೊಟ್ಟ ಕರ್ನಾಟಕದ ಸಚಿವ!

ಬೆಳಗಾವಿ : “ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಆಗಲಿದೆ. ಅದು ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆ ನಡುವಿನ ಮೈತ್ರಿ ಮೂಲಕ” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಭಾನುವಾರ ಮಾತನಾಡಿದ ಸಚಿವರು, “ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಕಾಂಗ್ರೆಸ್, ಶಿವಸೇನೆ ಮೂರು ಪಕ್ಷಗಳು ಒಟ್ಟಾದವು.
ಆದರೆ ಈ ಸರ್ಕಾರ ಬಹುದಿನಗಳವರೆಗೂ ಸಾಗುವ ಅನುಮಾನ ಈ ಹಿಂದೆಯೇ ಮೂಡಿತ್ತು” ಎಂದರು.
“ಒಂದು ವಾಹನ ಸುಸೂತ್ರವಾಗಿ ಚಲಾಯಿಸಲು ಒಬ್ಬರೆ ಚಾಲಕನಿರಬೇಕು. ಒಂದು ವಾಹನಕ್ಕೆ ಮೂವರು ಚಾಲಕರಿದ್ದು, ಅವರಲ್ಲಿ ಒಬ್ಬರ ಕಡೆ ಸ್ಟೇರಿಂಗ್, ಒಬ್ಬರ ಕಡೆ ಎಕ್ಸಿಲೇಟರ್, ಒಬ್ಬರ ಕಡೆ ಬ್ರೇಕ್ ಹಿಡಿದು ನಡೆಸಿದರೆ ನಿರ್ವಹಣೆ ಅಸಾಧ್ಯ” ಎಂದು ಮೂರು ಪಕ್ಷಗಳ ಮೈತ್ರಿ ಕುರಿತು ಸಚಿವರು ವ್ಯಂಗ್ಯವಾಡಿದರು.
ಕಾರ್ಯಕರ್ತರು ಒಪ್ಪುವುದಿಲ್ಲ
“ಶಿವಸೇನೆ ನಾಯಕರು ಮತ್ತು ಕಾರ್ಯಕರ್ತರು ಕಳೆದ 4-5 ದಶಕಗಳಿಂದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನವರನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೂ ಏಕಾಎಕಿ ಅಧಿಕಾರದಾಸೆಗೆ ಆ ಎರಡು ಪಕ್ಷದವರೊಂದಿಗೆ ಶಿವಸೇನೆ ಪಕ್ಷ ಹೊಂದಾಣಿಕೆ ಮಾಡಿಕೊಂಡರೆ ಕಾರ್ಯಕರ್ತರು ಒಪ್ಪುವುದಿಲ್ಲ. ಸಂದರ್ಭ ನೋಡಿಕೊಂಡು ಪಕ್ಷದಿಂದ ಹೊರ ನಡೆಯುತ್ತಾರೆ. ಶಿವಸೇನೆ ಕಾರ್ಯಕರ್ತರೇ ಈ ಹೊಂದಾಣಿಕೆ ಒಪ್ಪದಿದ್ದರೆ ಅಂತಹ ಸರ್ಕಾರಕ್ಕೆ ಆಯಸ್ಸು ಕಡಿಮೆ” ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಶಿವಸೇನೆ-ಬಿಜೆಪಿ ನಡುವೆ ಸಾಮ್ಯತೆ ಇದೆ
“ಶಿವಸೇನೆ ಹಾಗೂ ಬಿಜೆಪಿ ಪಕ್ಷಗಳು ಬೇರೆ-ಬೇರೆ ಆದರೆ ಸಾಕಷ್ಟು ಸಾಮ್ಯತೆಗಳು ಈ ಎರಡು ಪಕ್ಷಗಳ ಮಧ್ಯ ಇದೆ. ತತ್ವ, ಸಿದ್ಧಾಂತಗಳಲ್ಲಿ, ರಾಜಕೀಯ ವಿಷಯವಾಗಿಯು ಸಾಮ್ಯತೆ ಇದೆ. ಈ ಹಿಂದೆ ಈ ಎರಡು ಪಕ್ಷಗಳ ನಡುವೆ ಉತ್ತಮ ಸಂಬಂಧವಿತ್ತು. ಕೆಲವು ಕಾರಣಗಳಿಗಾಗಿ ಉಭಯ ಪಕ್ಷಗಳು ದೂರವಾಗಿದ್ದವು. ಇದು ಯಾವುದು ಶಾಶ್ವತವಲ್ಲ” ಎಂದು ಸಚಿವ ಮುರುಗೇಶ್ ನಿರಾಣಿ ಮೈತ್ರಿ ಸುಳಿವು ನೀಡಿದರು.
ಬಿಜೆಪಿ ಸನ್ಯಾಸಿಗಳ ಪಕ್ಷವಲ್ಲ
“ಈಗಾಗಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಅವಕಾಶಗಳು ಸಿಕ್ಕಾಗ ಕಣ್ಣುಮುಚ್ಚಿಕೊಂಡು ಕೂರಲು ಬಿಜೆಪಿ ಸನ್ಯಾಸಿಗಳ ಪಕ್ಷವಲ್ಲ. ಕಾಂಗ್ರೆಸ್, ಎನ್ ಸಿಪಿ ಪಕ್ಷದವರಿಗೆ ಆದ್ಯತೆ ನೀಡಿದ ಹಿನ್ನೆಲೆ ಶಿವಸೇನೆ ಶಾಸಕರು ಮಹಾರಾಷ್ಟ್ರದಲ್ಲಿ ಬಂಡಾಯವೆದ್ದಿದ್ದಾರೆ. ಆ ಎಲ್ಲ ಶಾಸಕರು ಸಮ್ಮಿಶ್ರ ಸರ್ಕಾರ ರಚಿಸಲು ಬೆಂಬಲ ಕೋರಿದರೆ, ಬಿಜೆಪಿ ಬೆಂಬಲ ನೀಡಲು ಸಿದ್ಧವಿದೆ. ಆ ಮೂಲಕ ನೆರೆ ರಾಜ್ಯದಲ್ಲೂ ಉತ್ತಮ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತ್ಯೇಕ ರಾಜ್ಯದ್ದು ವೈಯಕ್ತಿಕ ಹೇಳಿಕೆ
“ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ರಾಜ್ಯ ಸರ್ಕಾರ ಎಲ್ಲಿಯೂ ಹೇಳಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಈ ವಿಚಾರದಲ್ಲಿ ವ್ಯಕ್ತಿಯ ಹೇಳಿಕೆ ಸರ್ಕಾರದ ಹೇಳಿಕೆಯಾಗಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಉಮೇಶ್ ಕತ್ತಿ ಅವರು ನನಗಿಂತ ಹಿರಿಯರು, ನಾನು ಕೇವಲ ಮೂರು ಬಾರಿ ಶಾಸಕ ಆಗಿದ್ದೇನೆ. ಅವರು 9 ಬಾರಿ ಶಾಸಕರಾಗಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಿ” ಎಂದು ಪ್ರತ್ಯೇಕ ರಾಜ್ಯ ಕುರಿತು ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದರು.