“ಧಾರವಾಡ ಮತ್ತು ಬೆಳಗಾವಿ ನಡುವಿನ ನೇರ ರೈಲು ಸಂಪರ್ಕ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು”
ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಧಾರವಾಡ-ಬೆಳಗಾವಿ ರೈಲು ಯೋಜನೆಗೆ ಶೀಘ್ರವೇ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿದ್ದರು.

ಬೆಳಗಾವಿ ಜೂ.26: “ಧಾರವಾಡ ಮತ್ತು ಬೆಳಗಾವಿ ನಡುವಿನ ನೇರ ರೈಲು ಸಂಪರ್ಕ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಬೆಳಗಾವಿಯ ತಿಲಕವಾಡಿಯ ಮಿಲೇನಿಯಮ್ ಗಾರ್ಡನ್ ಬಳಿ ಬಿ.
ಎಸ್. ಚನ್ನಬಸಪ್ಪ ಟೆಕ್ಸ್ ಟೈಲ್ಸ್ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಬೆಳಗಾವಿ ಸಹ ಒಂದಾಗಿದೆ. ಜಿಲ್ಲೆಯಲ್ಲಿ ಹಲವಾರು ಉದ್ದಿಮೆಗಳನ್ನು ಆರಂಭಿಸಲು ಬಿಜೆಪಿ ಸರ್ಕಾರ ಉತ್ತೇಜನ ನೀಡುತ್ತಿದೆ. ಇತರ ಜಿಲ್ಲೆಗಳಂತೆ ಬೆಳಗಾವಿ ಸಹ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಮುಂಚೂಣಿಯಲ್ಲಿದೆ” ಎಂದರು.
“ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೂ ಹತ್ತಿರವಾದ ಬೆಳಗಾವಿಗೆ ಧಾರವಾಡ ಮತ್ತು ಬೆಳಗಾವಿ ನೇರ ರೈಲು ಸಂಪರ್ಕ ಕಲ್ಪಿಸುವುದು ಅತ್ಯಗತ್ಯವಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆ ಆರಂಭಕ್ಕೆ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ” ಎಂದು ತಿಳಿಸಿದರು.
“ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಶೀಘ್ರವೇ ಅಗತ್ಯದ ಭೂಮಿ ಸ್ವಾಧೀನ ಪಡಿಸಿಕೊಂಡು ಸಾಧ್ಯವಾದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ವಿಧದ ಅನುಮತಿಗಳನ್ನು ನೀಡಿದೆ. ಬೆಳಗಾವಿಯಲ್ಲಿ ಹಲವಾರು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ” ಎಂದರು.
ಸಂಸದರ ಮನವಿ; ಬೆಳಗಾವಿ ಸಂಸದೆ ಮಂಗಲ ಸುರೇಶ ಅಂಗಡಿ ಈ ಹಿಂದೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರು. ಈ ವೇಳೆ ಧಾರವಾಡ-ಬೆಳಗಾವಿ ರೈಲು ಯೋಜನೆಗೆ ಶೀಘ್ರವೇ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿದ್ದರು.
ಅಲ್ಲದೇ ವಾಣಿಜ್ಯ, ಶೈಕ್ಷಣಿಕ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಬಸವರಾಜ ಬೊಮ್ಮಾಯಿ ಕೂಡಲೇ ಚರ್ಚಿಸಿ ಕೆಲಸಗಳಿಗೆ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು.