Breaking; ಸಿದ್ದರಾಮಯ್ಯ, ಡಿಕೆಶಿಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಕರೆ

ಬೆಂಗಳೂರು, ಜೂನ್ 27; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಕರೆ ಬಂದಿದೆ.
ಮಂಗಳವಾರ ಸಂಜೆ ಉಭಯ ನಾಯಕರು ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ.
ತುರ್ತಾಗಿ ನವದೆಹಲಿಗೆ ಬನ್ನಿ ಎಂದು ಸೋಮವಾರ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್‌ಗೆ ಹೈಕಮಾಂಡ್‌ನಿಂದ ಕರೆ ಬಂದಿದೆ. ಮಂಗಳವಾರ ಮಧ್ಯಾಹ್ನ ಉಭಯ ನಾಯಕರು ದೆಹಲಿ ವಿಮಾನವೇರಲಿದ್ದಾರೆ.
ಜೂನ್ 28ರ ಸಂಜೆ ರಾಹುಲ್ ಗಾಂಧಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಹ ಸಭೆಯಲ್ಲಿ ಜೊತೆಯಲ್ಲಿ ಇರಲಿದ್ದಾರೆ.
ಕಳೆದ ವಾರ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದರು. ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ವಿಚಾರಣೆ ನಡೆಸುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈಗ ತುರ್ತಾಗಿ ದೆಹಲಿಗೆ ಬರುವಂತೆ ಕರೆ ಬಂದಿದೆ.
ಯಾವ ವಿಚಾರದ ಕುರಿತು ಚರ್ಚೆ ನಡೆಸಲು ಹೈಕಮಾಂಡ್ ತುರ್ತಾಗಿ ದೆಹಲಿಗೆ ಬರುವಂತೆ ಸೂಚನೆ ನೀಡಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ, ಈ ಹಿನ್ನಲೆಯಲ್ಲಿ ಹೈಕಮಾಂಡ್ ಕರೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿದೆ, ಅಗ್ನಿಪಥ್ ಯೋಜನೆ ವಿರೋಧಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಇದರ ಹೊರತಾಗಿಯೂ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲು ಉಭಯ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿರುವ ನಿರೀಕ್ಷೆ ಇದೆ.
ಕರ್ನಾಟಕ ಕಾಂಗ್ರೆಸ್ ಸಾಮೂಹಿಕ ನಾಯತಕ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕು ಎಂಬ ಚರ್ಚೆಗಳು ಸಹ ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ? ಎಂದು ಕಾದು ನೋಡಬೇಕು.