ಯಲ್ಲಮ್ಮದೇವಿ ಜಗ ಹೊತ್ತುಕೊಂಡೇ ಬೆಳಗಾವಿ ಡಿಸಿ ಕಚೇರಿಗೆ ಬಂದ ಜೋಗತಿಯರು

ಉತ್ತರಕರ್ನಾಟಕದ ಶಕ್ತಿದೇವತೆ, ಲಕ್ಷಾಂತರ ಭಕ್ತರ ಪಾಲಿನ ಆರಾಧ್ಯ ದೇವಿ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಸುಕ್ಷೇತ್ರದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಜೋಗತಿಯರು ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಲೆ ಮೇಲೆ ಸವದತ್ತಿ ಯಲ್ಲಮ್ಮ ದೇವಿಯ ಮೂರ್ತಿಯನ್ನು ಹೊತ್ತುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜೋಗತಿಯರು ಯಲ್ಲಮ್ಮ ಗುಡ್ಡದಲ್ಲಿನ ಅವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದರು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಜೋಗತಿಯರು ನಮಗೆ ಯಾವುದೇ ಅನುಕೂಲ, ವ್ಯವಸ್ಥೆ ಇಲ್ಲ. ಪ್ರತಿಯೊಂದಕ್ಕೂ ಡಬಲ್ ರೇಟ್ ಕೊಡಬೇಕಾಗುತ್ತಿದೆ. 10-20 ಸಾವಿರ ರೂಪಾಯಿ ಖರ್ಚು ಮಾಡಿ ಹೋದ್ರೂ ನಮಗೆ ಅಲ್ಲಿ ಯಾವುದೇ ರೀತಿ ವ್ಯವಸ್ಥೆ ಸಿಗುತ್ತಿಲ್ಲ. ಅಲ್ಲಿ ನಮಗೆ ಬಾಡಿಗೆ ಮನೆ ಸಹಿತ ಸಿಗುತ್ತಿಲ್ಲ, ಹೊರಗೆ ಅಡುಗೆ ಮಾಡಿಕೊಂಡು ತಿನ್ನೋದು ಬರೋದು ಆಗುತ್ತಿದೆ. ನಿಲ್ಲೋಕೆ ಜಾಗೆ ಕೂಡ ಇಲ್ಲ. ಹೀಗಾಗಿ ನಾವು ಜಿಲ್ಲಾಧಿಕಾರಿ ಕಚೇರಿಗೆ ಜೋಗ ಹಾಕಿಕೊಂಡು ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ದಲಿತ ಮುಖಂಡ ರಾಜು ತೊಂಬರೆ ಮಾತನಾಡಿ ಸವದತ್ತಿ ಯಲ್ಲಮ್ಮ ಗುಡ್ಡದಲ್ಲಿ ಯಾವುದೇ ರೀತಿ ಸ್ವಚ್ಛತೆ ಇಲ್ಲ. ಶೌಚಾಯಲಯ, ಬಾತರೂಮ್ ಇಲ್ಲ. ಭಕ್ತರಿಗೆ ಇರಲು ಯಾವುದೇ ವಸತಿ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಎಲ್ಲಾ ದುಬಾರಿ ಬೆಲೆ ಇದೆ. ಇದರಿಂದ ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಅನುಮಾನ ನಮಗೆ ಮೂಡಿದೆ. ತಮಗೆ ಬೇಕಾದವರಿಗೆ ನೇರವಾಗಿ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಆದರೆ ಸಾಮಾನ್ಯ ಜನರಿಗೆ ಬೆಳಿಗ್ಗೆಯಿಂದ ಸಾಯಂಕಾಲ ಕ್ಯೂ ಹಚ್ಚಿ ನಿಂತರೂ ದೇವಿಯ ದರ್ಶನ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಒಟ್ಟಿನಲ್ಲಿ ಸವದತ್ತಿ ಯಲ್ಲಮ್ಮ ದೇವಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧ್ಯದೇವಿಯಾಗಿದ್ದು. ಪ್ರತಿನಿತ್ಯ ಸಾವಿರಾರು ಭಕ್ತರು, ವಿಶೇಷ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ. ಆದರೆ ಹೀಗೆ ಬಂದ ಭಕ್ತರಿಗೆ ಒಳ್ಳೆಯ ವ್ಯವಸ್ಥೆ ಮಾಡದೇ ಇದ್ದರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದ್ದು. ಇನ್ಮೇಲಾದ್ರೂ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.