ವಿದ್ಯುತ್ ದರ ಏರಿಕೆ; ಜುಲೈ 1ರಿಂದ ಹೊಸ ದರ ಜಾರಿ

ಬೆಂಗಳೂರು ಜೂನ್ 28: ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಬಳಕೆಯ ಪ್ರತಿ ನೂರು ಯೂನಿಟ್ ದರ ಏರಿಕೆ ಮಾಡುವ ಮೂಲಕ ಸರ್ಕಾರ ಮುಂದಿನ ವಾರದಿಂದಲೇ ಜನರ ಜೇಬಿಗೆ ಕತ್ತರಿ ಹಾಕಲಿದೆ.
ಹೊಸ ದರ ಮುಂದಿನ ತಿಂಗಳ ಜುಲೈ 1ರಿಂದಲೇ ಅನ್ವಯವಾಗಲಿದೆ.
ಮಾಸಿಕ 100 ಯೂನಿಟ್ ಹಾಗೂ ಅದರ ಮೇಲಿನ ವಿದ್ಯುತ್ ಯೂನಿಟ್ ಬಳಕೆ ಮೇಲಿದ್ದ 19 ರೂಪಾಯಿ ದರವನ್ನು 31ಕ್ಕೆ ಏರಿಕೆ ಮಾಡಲಾಗಿದೆ.
ಪೆಟ್ರೋಲ್, ಡೀಸೆಲ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಾವಜನಿಕರು ಈಗ ಹೆಚ್ಚು ವಿದ್ಯುತ್ ಶುಲ್ಕ ಪಾವತಿಸಬೇಕಿದೆ.
ಪ್ರತಿ ತಿಂಗಳು 100ಯೂನಿಟ್ ಮತ್ತು ಅದಕ್ಕಿಂತ ಹೆಚ್ಚುವರಿಯಾಗಿ ವಿದ್ಯುತ್ ಬಳಸುವವರು ದರ ಏರಿಕೆಯ ವ್ಯಾಪ್ತಿಗೆ ಬರುತ್ತಾರೆ. 2021 -2022ರ ಕೊನೆಯ ತ್ರೈಮಾಸಿಕದಲ್ಲಿ ಕಲ್ಲಿದ್ದಲು ಬೆಲೆ ಏರಿಕೆಯಾಗಿತ್ತು. ಈವರೆಗೆ ಅಧಿಕ ಬೆಲೆ ಕಲ್ಲಿದ್ದಲು ಖರೀದಿಸಿದ್ದ ಸರ್ಕಾರ ಆ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಿದೆ. ಎಸ್ಕಾಂಗಳು ಆರ್ಥಿಕ ನಷ್ಟ ಅನುಭವಿಸುತ್ತಿರುವುದರಿಂದ ರಾಜ್ಯದಲ್ಲಿ ಈಗ ಬೆಲೆ ಏರಿಕೆ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಎಸ್ಕಾಂಗಳಿಂದ ಕೆಇಆರ್‌ಸಿಗೆ ಪ್ರಸ್ತಾವನೆ
ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಪಡೆಯಲು ಅವಕಾಶ ಕಲ್ಪಿಸುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಎಸ್ಕಾಂಗಳು (ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಕಾಂ) ಪ್ರಸ್ತಾವನೆ ಸಲ್ಲಿಸಿದ್ದವು. ಈ ಪ್ರಸ್ತಾವನೆಯಲ್ಲಿ ಎಸ್ಕಾಂಗಳು ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು 38 ರಿಂದ 55ರೂಪಾಯಿ ವರೆಗೆ ವಸೂಲಿ ಮಾಡಲು ಅವಕಾಶ ನೀಡಿ ಎಂದು ಕೋರಿದ್ದವು.
ಎಸ್ಕಾಂಗಳು ಕೇಳಿದ್ದ ದರ ಎಷ್ಟು?
ಎಸ್ಕಾಂಗಳು ಪ್ರತಿ ಯೂನಿಟ್‌ಗೆ 38 ರಿಂದ 55ರು. ಗೆ ಹೆಚ್ಚಿಸುವಂತೆ ಕೋರಿದ್ದವು. ಇದರಲ್ಲಿ ಬೆಸ್ಕಾಂ 55.28ರೂ., ಹೆಸ್ಕಾಂ 49.54ರೂ, ಮೆಸ್ಕಾಂ 38.98 ರೂ., ಸೆಸ್ಕ್ 40.47 ಹಾಗೂ ಗೆಸ್ಕಾಂ 39.36 ರೂ. ಹೆಚ್ಚು ಮಾಡುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
ಆದರೆ ಸರ್ಕಾರ ಎಸ್ಕಾಂ ಗಳು ಕೇಳಿಕೊಂಡಿದ್ದ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿಲ್ಲ. ಇಷ್ಟು ದರ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಭಾವಿಸಿರುವ ಸರ್ಕಾರ ಎಸ್ಕಾಗಳು ಕೋರಿದ್ದ ಕೇಳಿಕೊಂಡಿದ್ದ ದರ ಕಡಿತಗೊಳಿಸಿ ಹೊಸ ದರಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಆರ್ಥಿಕ ನಷ್ಟದಲ್ಲಿರುವ ಎಸ್ಕಾಂಗಳು
ಕಲ್ಲಿದ್ದಲಿನ ಅಭಾವ ಜತೆಗೆ ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳಿಗೆ ಸಮರ್ಪಕವಾಗಿ ಪೂರೈಕೆ ಆಗಿಲ್ಲ. ಅಭಾವ ಉಂಟಾಗುತ್ತಿದೆ ಎಂಬ ವರದಿ ಇದೆ. ಇತ್ತ ಶಾಖೊತ್ಪನ್ನ ವಿದ್ಯುತ್ ಘಟಗಳಲ್ಲಿ ಉತ್ಪಾದನೆಯ ವೆಚ್ಚ ಸಹ ಅಧಿಕವಾಗಿದೆ. ಇದರಿಂದ ಎಸ್ಕಾಂಗಳು ನಷ್ಟದಲ್ಲಿರುವ ಕಾರಣ ತಾತ್ಕಾಲಿಕವಾಗಿ ವಿದ್ಯುತ್ ಏರಿಕೆ ಮಾಡಿದೆ. ಆರ್ಥಿಕ ಸಂಕಷ್ಟ ಕಡಿಮೆಯಾಗಿ ಹೊರೆ ತಗ್ಗಿದ ನಂತರ ವಿದ್ಯುತ್ ದರ ಸಹಜ ಸ್ಥಿತಿಗೆ ಮರಳಿಸುವುದಾಗಿ ಎಸ್ಕಾಂಗಳು ಭರವಸೆ ನೀಡಿವೆ. ಎಸ್ಕಾಂಗಳು ಆರ್ಥಿಕವಾಗಿ ಚೇತರಿಕೆ ಕಾಣುವವರೆಗೆ ಇದೇ ಬೆಲೆ ಪಾವತಿಸುವ ದುಸ್ಥಿತಿ ಜನರಿಗೆ ಎದುರಾಗಿದೆ.
ಏಪ್ರಿಲ್‌ನಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ
ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯಿಂದಾಗಿ ಕಳೆದ ಏಪ್ರಿಲ್ ಮೂರನೇ ವಾರದಲ್ಲಿ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ಈ ಕಾರಣದಿಂದಲೇ ಅಂದಿನ ಸಂದರ್ಭದಲ್ಲಿ ತೀವ್ರ ವಿದ್ಯುತ್ ಕಡಿತ ಮಾಡಲಾಗಿತ್ತು. ಬೇಡಿಕೆ ಹೆಚ್ಚಿದ್ದರು ಎಲ್ಲ ಮೂಲಗಳಿಂದ ಪೂರೈಕೆ ಆಗುತ್ತಿದ್ದ ನಿತ್ಯದ ಸರಾಸರಿ 14,000 ಮೆಗಾ ವ್ಯಾಟ್‌ನಿಂದ 11,550 ಮೆಗಾವ್ಯಾಟ್‌ಗೆ ಇಳಿಕೆ ಆಗಿತ್ತು ಎಂದು ತಿಳಿದು ಬಂದಿದೆ.